ಬೆಂಗಳೂರು: ಬೆಳ್ಳಂಬೆಳಿಗ್ಗೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಸಂಜನಾಳನ್ನು ವಶಕ್ಕೆ ಪಡೆದಿದ್ದಾರೆ.
ಇಂದಿರಾನಗರದ ಸಾಯಿ ತೇಜ ಅಪಾರ್ಟ್‍ಮೆಂಟ್ ಮೇಲೆ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಅಂಜುಮಾಲಾ, ಪುನೀತ್ ನೇತೃತ್ವದ ಹತ್ತಕ್ಕೂ ಹೆಚ್ಚು ಪೊಲೀಸರ ತಂಡ ದಾಳಿ ಮಾಡಿದೆ.
ಸಂಜನಾಳ ಇಡೀ ಮನೆ ಹಾಗೂ ಐಷಾರಾಮಿ ಕಾರುಗಳು ಸೇರಿದಂತೆ ಇಂಚಿಂಚೂ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ದಾಳಿಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ನಟಿ ಸಂಜನಾಳನ್ನು ವಶಕ್ಕೆ ಪಡೆಯುತ್ತಿದ್ದಂತೆ ಸಿಸಿಬಿ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಸಿಸಿಬಿ ಕಚೇರಿಗೆ ಹೊರಡಲು ರೆಡಿಯಾಗಿ ಎಂದು ಸಿಸಿಬಿ ಅಧಿಕಾರಿಗಳು ಹೇಳುತ್ತಿದ್ದಂತೆ ನಾನು ಬರಲ್ಲ. ನಾನೇನು ಆರೋಪಿನಾ ? ನಾನ್ಯಾಕೆ ಬರಬೇಕು ? ನನಗೆ ನೋಟಿಸ್ ಕೊಟ್ಟಿದ್ದೀರಾ ಎಂದು ಸಿಸಿಬಿ ಅಧಿಕಾರಿಗಳನ್ನು ಸಂಜನಾ ಪ್ರಶ್ನಿಸಿದ್ದಾರೆ.
ಸಂಜನಾಳನ್ನು ವಶಕ್ಕೆ ಪಡೆಯುತ್ತಿದ್ದಂತೆ ತಾಯಿ ಸಹ ಕಣ್ಣೀರು ಹಾಕಿದ್ದಾರೆ. ಸಂಜನಾ ಕಾರು ಚಾಲಕನನ್ನೂ ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಸಂಜನಾ ಬಳಿ ಇದ್ದ ಮೂರು ಮೊಬೈಲ್ ಹಾಗೂ ಲ್ಯಾಪ್‍ಟಾಪ್‍ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಕಚೇರಿಗೆ ಕರೆತಂದು ತೀವ್ರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹೈ-ಫೈ ಪಾರ್ಟಿಗಳಲ್ಲಿ ಭಾಗವಹಿಸಿದ್ದೇ ನಟಿ ಸಂಜನಾ ಗಲ್ರಾನಿಗೆ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ.
ಸಂಜನಾ ಮನೆ ಮೇಲೆ ದಾಳಿ pic.twitter.com/vAXUIl5qbg
— Saakshatv-videos (@Saakshatv_video) September 8, 2020