ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ ಅವರ ವಿರುದ್ಧ 1640 ಕೋಟಿ ರೂಪಾಯಿ (250 ಮಿಲಿಯನ್ ಡಾಲರ್) ಲಂಚ ನೀಡಿ ಗುತ್ತಿಗೆ ಪಡೆಯಲು ವಂಚನೆ ನಡೆಸಿದ ಆರೋಪದ ಮೇಲೆ ನ್ಯೂಯಾರ್ಕ್ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಅಮೆರಿಕ ಪ್ರಾಸಿಕ್ಯೂಟರ್ಗಳ ಪ್ರಕಾರ, ಗೌತಮ್ ಅದಾನಿ ಅವರು ತಮ್ಮ ಕಂಪನಿಗೆ ಗುತ್ತಿಗೆ ಪಡೆಯಲು ಲಂಚ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಮೂಲಕ ವಾಸ್ತವಾಂಶಗಳನ್ನು ಮರೆಮಾಚಿ, ವಂಚನೆ ನಡೆಸಿದ್ದಾರೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 250 ಮಿಲಿಯನ್ ಡಾಲರ್ ಲಂಚವು ಅಕ್ರಮ ಹಣ ವರ್ಗಾವಣೆಗೆ ದಾರಿ ಮಾಡಿಕೊಟ್ಟಿರುವ ಬಗ್ಗೆ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ.
ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಆರೋಪಗಳು ಕೇಳಿಬಂದ ನಂತರ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಭಾರೀ ಕುಸಿತ ಕಂಡಿವೆ. ಇದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದು, ಕಂಪನಿಯ ಭವಿಷ್ಯದ ಬಗ್ಗೆ ಅಸ್ಪಷ್ಟತೆ ಉಂಟಾಗಿದೆ.
ಮುಖ್ಯ ಷೇರುಗಳ ಕುಸಿತ:
ಅದಾನಿ ಎನರ್ಜಿ: ಶೇ.20 ರಷ್ಟು ಕುಸಿತ.
ಅದಾನಿ ಗ್ರೀನ್ ಎನರ್ಜಿ: ಶೇ.18.6 ರಷ್ಟು ಕುಸಿತ.
ಅದಾನಿ ಎಂಟರ್ಪ್ರೈಸಸ್ ಮತ್ತು ಅಂಬುಜಾ ಸಿಮೆಂಟ್ಸ್: ಶೇ.15 ರಷ್ಟು.
ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಪವರ್: ಶೇ.15 ರಷ್ಟು.
ACC: ಶೇ.13 ರಷ್ಟು.
ಅದಾನಿ ಪೋರ್ಟ್ಸ್, ವಿಲ್ಮರ್, NDTV: ಶೇ.10 ರಷ್ಟು.
ಸಂಘಿ ಇಂಡಸ್ಟ್ರೀಸ್: ಶೇ.7 ರಷ್ಟು.
ಈ ಷೇರುಗಳ ಕುಸಿತದ ಹಿನ್ನೆಲೆ, ಗೌತಮ್ ಅದಾನಿ ಅವರ ಒಟ್ಟಾರೆ ನಿವ್ವಳ ಮೌಲ್ಯದಲ್ಲಿ ಭಾರೀ ಕುಸಿತ ಉಂಟಾಗಿದೆ ಎಂದು ವರದಿಯಾಗಿದೆ.
ಈ ಆರೋಪಗಳು ಭಾರತ ಮತ್ತು ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ತೀವ್ರ ಸಂಚಲನವನ್ನು ಉಂಟುಮಾಡಿದ್ದು, ನಿಗಮಗಳ ನೈತಿಕತೆ, ಪಾರದರ್ಶಕತೆ ಮತ್ತು ನಿಯಮಗಳ ಪಾಲನೆ ಕುರಿತ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.