ಸರ್ಕಾರ ಆದೇಶ ನೀಡದೇ ಹೋದರೆ ಕೋವಿಶೀಲ್ಡ್ ಲಸಿಕೆ ಉತ್ಪಾದನೆ 50% ಗೆ ಇಳಿಕೆ : ಪೂನಾವಾಲಾ
ನವದೆಹಲಿ : ದೇಶದಲ್ಲಿ ಒಮಿಕ್ರಾನ್ ಆತಂಕ ತಲೆ ದೂರಿರುವಾಗಲೇ ಲಸಿಕೆಯ ಅಭಿಯಾನ ಮತ್ತಷ್ಟು ವೇಗ ಪಡೆದಿದೆ.. ಈ ನಡುವೆ ಇದುವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬರದಿದ್ದರಿಂದ ಮುಂದಿನ ವಾರದಿಂದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಶೇ.50 ರಷ್ಟು ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪೂನಾವಾಲಾ ಕೇಂದ್ರ ಸರ್ಕಾರ ಹೆಚ್ಚುವರಿ ಆರ್ಡರ್ ನೀಡದಿದ್ದರೆ ಮುಂದಿನ ವಾರದಿಂದಲೇ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಪ್ರಮಾಣವನ್ನು ಕಡಿತಗೊಳಿಸುತ್ತದೆ ಎಂದಿದ್ಧಾರೆ..
ಅಲ್ಲದೇ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ಅಗತ್ಯವಿದ್ದರೆ ಹೆಚ್ಚುವರಿ ಲಸಿಕೆ ಉತ್ಪಾದನಾ ಸಾಮರ್ಥ್ಯ ಉಳಿಸಿಕೊಳ್ಳಲು ಬಯಸುತ್ತೇನೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಆದೇಶವಿಲ್ಲದ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆಯನ್ನು ಕಡಿತಗೊಳಿಸಲಿದ್ದೇವೆ. 20-30 ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಸಂಗ್ರಹಿಸುವುದಾಗಿ ಕೇಂದ್ರ ಹೇಳಿದೆ. ನಾವು ಪರವಾನಗಿ ಪಡೆದ ತಕ್ಷಣ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಉತ್ಪಾದಿಸಬಹುದು ಎಂದು ಹೇಳಿದ್ದಾರೆ.







