ಕೆಎಸ್‍ಎಸ್‍ಐಡಿಸಿಯಿಂದ ಮೋದಿ ಕನಸು ಭಗ್ನ
– ಮೇಕ್ ಇನ್ ಇಂಡಿಯಾದಡಿ ರಕ್ಷಣಾ ಹೂಡಿಕೆಗೆ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಿದ್ದರೂ ಕ್ಯಾರೆ ಎನ್ನದ ಕೆಎಸ್‍ಎಸ್‍ಐಡಿಸಿ
– ಎರಡು ಬಾರಿ ರಕ್ಷಣಾ ಇಲಾಖೆ ಸೂಚನೆ ನೀಡಿದ್ದರೂ ಸಂಸ್ಥೆಯ ನಿರ್ಲಕ್ಷ್ಯ
– 2 ವರ್ಷದಿಂದ ತುಂಡು ಭೂಮಿಗಾಗಿ ಅಲೆದಾಡುತ್ತಿರುವ ಕಂಪನಿ
ಬೆಂಗಳೂರು: ಕರ್ನಾಟಕದ ಮಟ್ಟಿಗೆ ದೇಶದ `ಮೇಕ್ ಇನ್ ಇಂಡಿಯಾ’ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ, ರಾಜ್ಯದ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಎಸ್‍ಎಸ್‍ಐಡಿಸಿ) ಈ ಕನಸು ನನಸು ಮಾಡುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಎಇಸಿಪಿಎಲ್) ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ನೀಡದ ಹೊರತಾಗಿಯೂ ಹಲವಾರು ರಕ್ಷಣಾ ಕ್ಷೇತ್ರಗಳಿಗೆ ಹೈ ಎಂಡ್ ಮೆಟಲ್ ಕಟಿಂಗ್ ಟೂಲ್ಸ್ ಅನ್ನು ಪೂರೈಕೆ ಮಾಡುತ್ತಿದೆ.
ಈ ಮಧ್ಯೆ, ಭರವಸೆಯಂತೆ ಯುದ್ಧ ವಿಮಾನಗಳು ಅಥವಾ ಶಸ್ತ್ರಾಸ್ತ್ರಗಳನ್ನು ನೀಡುವಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಇಂಡಸ್ಟ್ರೀಸ್ ಮತ್ತು ಇತರೆ ರಕ್ಷಣಾ ಕ್ಷೇತ್ರದ ಸಂಸ್ಥೆಗಳು ವಿಳಂಬ ಮಾಡುತ್ತಿವೆ ಎಂದು ಮಾಧ್ಯಮಗಳು ಟೀಕಿಸುತ್ತಿವೆ. ಆದರೆ, ಸತ್ಯಾಂಶವೆಂದರೆ, ಕರ್ನಾಟಕದಲ್ಲಿ ಅಧಿಕಾರಸ್ಥರ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಜರ್ಮನಿಯ ಅಂಗಸಂಸ್ಥೆಯಾಗಿರುವ ಎಇಸಿಪಿಎಲ್ ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಇವರು ಭಾರತದಲ್ಲಿ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಕಂಪನಿ ರಷ್ಯಾದಲ್ಲಿಯೂ ತನ್ನ ವ್ಯವಹಾರವನ್ನು ಹೊಂದಿದೆ.
ಕಂಪನಿಯು ಎಚ್‍ಎಎಲ್‍ಗೆ ಎಲ್‍ಸಿಎ ತೇಜಸ್ ಮತ್ತು ಇಂಜಿನ್ ಯೋಜನೆಗೆ ಅಗತ್ಯವಾದ ಮೆಟಲ್ ಕಟಿಂಗ್ ಟೂಲ್ಸ್ ಅನ್ನು ಪೂರೈಕೆ ಮಾಡುತ್ತಿತ್ತು. ಇದಲ್ಲದೇ, ಕಂಪನಿಯು ಡಿ.ಆರ್.ಡಿ.ಒ, 515 ಆರ್ಮಿ ಬೇಸ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೇಟರೀಸ್ ಮತ್ತು ಏರೋಸ್ಪೇಸ್‍ಗೆ ಸಂಬಂಧಿಸಿದ ಇತರೆ ಕಂಪನಿಗಳೊಂದಿಗೆ ನಿಕಟವಾಗಿ ವ್ಯವಹಾರಗಳನ್ನು ನಡೆಸುತ್ತಾ ಬಂದಿದೆ. ಜೆಎಸ್‍ಡಬ್ಲ್ಯೂ, ಮಿಶ್ರಾ ಧಾತು ನಿಗಮ್ ಲಿಮಿಟೆಡ್, ಬಾಷ್ ಸೇರಿದಂತೆ ಇನ್ನಿತರೆ ದೊಡ್ಡ ಕಂಪನಿಗಳೊಂದಿಗೆ ಸಹಯೋಗವನ್ನು ಹೊಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ `ಮೇಕ್ ಇನ್ ಇಂಡಿಯಾ’ ಉಪಕ್ರಮದಿಂದ ಪ್ರೇರೇಪಿತವಾಗಿರುವ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ ಪ್ಲಾಟ್ ನಿರ್ಮಾಣಕ್ಕೆ ಭೂಮಿಗಾಗಿ (ಸಂಖ್ಯೆ ಡಿ143) ಅರ್ಜಿ ಸಲ್ಲಿಸಿತ್ತು.
ಆದರೆ, 2018 ರಿಂದ ಇಲ್ಲಿವರೆಗೆ ಕಂಪನಿಯ ಕಂಪನಿಗೆ ತಣ್ಣೀರೆರಚಲಾಗುತ್ತಿದೆ. ಏಕೆಂದರೆ, ಅಂದಿನಿಂದ ಕೆಎಸ್‍ಎಸ್‍ಐಡಿಸಿ ಕಂಪನಿಯ ಅರ್ಜಿಯನ್ನು ಸಂಪೂರ್ಣ ನಿರ್ಲಕಷಿಸಿದೆ. ಇದುವರೆಗೆ ಈ ಬಗ್ಗೆ ಯಾವುದೇ ನಿರ್ಧಾರವನ್ನು ಹೊರ ಹಾಕಿಲ್ಲ. ಕಂಪನಿಯ ಅಧಿಕಾರಿಗಳು ಭೂಮಿ ಪಡೆಯಲು ಕಚೇರಿಗಳ ಕಂಬ ಸುತ್ತುವ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಕೆಎಸ್‍ಎಸ್‍ಐಡಿಸಿ ಮಾತ್ರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ.
ವಿಚಿತ್ರವೆಂದರೆ ಎಡಿಡಿ 28 ಆಗಸ್ಟ್ 2018 ರಲ್ಲಿ ಕಳುಹಿಸಿದ್ದ ಇಮೇಲ್‍ಗೆ ಪ್ರತಿಕ್ರಿಯೆ ನೀಡಿದ್ದ ಅಂದಿನ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು, 6 ಸೆಪ್ಟಂಬರ್ 2018 ರಂದು ಕೆಎಸ್‍ಎಸ್‍ಐಡಿಸಿಗೆ ಪತ್ರ ಬರೆದು ಕಂಪನಿಗೆ ಆದ್ಯತೆ ಮೇಲೆ ಭೂಮಿಯನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಿದ್ದರು. ಆದರೆ, ಈ ನಿರ್ದೇಶನಕ್ಕೆ ಕೆಎಸ್‍ಎಸ್‍ಐಡಿಸಿ ತಲೆಯನ್ನೇ ಕೆಡಿಸಿಕೊಂಡಿಲ್ಲ ಮತ್ತು ಭೂಮಿ ಮಂಜೂರು ಮಾಡುವ ಗೋಜಿಗೇ ಹೋಗಿಲ್ಲ.
ರಕ್ಷಣಾ ಇಲಾಖೆಯು ಕೆಎಸ್‍ಎಸ್‍ಐಡಿಸಿಗೆ ಮತ್ತೊಂದು ಪತ್ರ ಬರೆದು, ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಕೆಗೆ ಅವಕಾಶ ನೀಡಿ ಮತ್ತು ಹೂಡಿಕೆ ಮಾಡಲು ಆಸಕ್ತಿ ಇರುವವರೊಂದಿಗೆ ಚರ್ಚೆ ನಡೆಸಿ. ರಕ್ಷಣಾ ಸಚಿವರು ರಕ್ಷಣಾ ಕೈಗಾರಿಕೆ ಅಭಿವೃದ್ದಿ ಸಭೆಯಲ್ಲಿ ರಕ್ಷಣಾ ಹೂಡಿಕೆದಾರರ ಘಟಕವನ್ನು ಸ್ಥಾಪಿಸುವಂತೆ ಸೂಚಿಸಿದ್ದಾರೆ. ಭೂಮಿ ಮಂಜೂರು ಮಾಡುವಂತೆ ಎಇಸಿಪಿಎಲ್ ರಕ್ಷಣಾ ಇಲಾಖೆಗೆ ಮನವಿ ಮಾಡಿಕೊಂಡಿದೆ. ಆ ಪತ್ರವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಹೇಳುವ ಮೂಲಕ ಕಂಪನಿಗೆ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಿತ್ತು.
ಆದಾಗ್ಯೂ, ಕೆಎಸ್‍ಎಸ್‍ಐಡಿಸಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲದಿರುವ ಹಿಂದಿನ ಮರ್ಮ ಈಗ ಕಂಪನಿಗೆ ಸ್ಪಷ್ಟವಾದಂತಾಗಿದೆ.








