ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಐಪಿಎಸ್ ಅಧಿಕಾರಿ ಚಂದ್ರಶೇಖರ್ (ADGP Chandrashekar) ಮೇಲೆ ಅಕ್ರಮ ಆಸ್ತಿ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಎಡಿಜಿಪಿ ಕೆಂಡಾಮಂಡಲವಾಗಿದ್ದಾರೆ.
ಕುಮಾರಸ್ವಾಮಿಗೆ (HD Kumaraswamy) ಪತ್ರದ ಮೂಲಕ ಸ್ಪಷ್ಟನೆ ನೀಡಿ, ಆಕ್ರೋಶ ಹೊರ ಹಾಕಿದ್ದಾರೆ. ಪತ್ರದಲ್ಲಿ ಕುಮಾರಸ್ವಾಮಿಯನ್ನು ಆರೋಪಿ ಎಂದಿದ್ದಾರೆ. ಪ್ರಕರಣ ಒಂದರ ಆರೋಪಿ ಎಂದು ಚಂದ್ರಶೇಖರ್ ಪತ್ರ ಆರಂಭಿಸಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ.
ಎಸ್‌ಐಟಿ (SIT) ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿದೆ. ಆರೋಪಿ ಹೆಚ್.ಡಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ನಮ್ಮನ್ನ ಕುಗ್ಗಿಸುವ ಯತ್ನ ಮಾಡಿದ್ದಾರೆ. ಭಯ ಹುಟ್ಟಿಸುವ ಉದ್ಧೇಶ ಅವರಿಗಿರಬಹುದು. ಅವನು ಎಷ್ಟೇ ಉನ್ನತ ಸ್ಥಾನದಲ್ಲಿದಲ್ಲಿದ್ದರೂ ಆತನೊಬ್ಬ ಆರೋಪಿ. ಇಂತಹ ಆರೋಪ ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು. ನಾನು ಭಯವಿಲ್ಲದೇ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಎಂದು ತಮ್ಮ ಸಿಬ್ಬಂದಿಗೆ ಪತ್ರ ಬರೆದು ಭರವಸೆ ನೀಡಿದ್ದಾರೆ.
ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ. ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ. ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.