ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ 1.ರೂ ಮಾನನಷ್ಟ ಮೊಕದ್ದಮೆ ಹೂಡಿದ ನಟ ಚೇತನ್..!
ನಟ, ಸಾಮಾಜಿಕ ಚಿಂತಕ ಾದಿನಗಳು ಚೇತನ್ ಅವರು ಆಗಾಗ ಸುದ್ದಿಯಲ್ಲಿಯೇ ಇರುತ್ತಾರೆ.. ಇತ್ತೀಚೆಗೆ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನ ಮಾಡಿರುವ ಆರೋಪ ಹೊತ್ತಿದ್ದರು.. ಅಲ್ಲದೇ ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ವಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹಲಸೂರು ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದರು.
ಇದೀಗ ಕರ್ನಾಟಕ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಕನ್ನಡ ನಟ ಚೇತನ್ ಅಹಿಂಸಾ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಜೂನ್ 24 ರಂದು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಪ್ರಕರಣ ಕೈಗೆತ್ತಿಕೊಂಡಿದ್ದು, ಸಚಿವ ಶಿವರಾಮ್ ಹೆಬ್ಬಾರ್ಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಜುಲೈ 14 ರಂದು ನಡೆಸಲು ತೀರ್ಮಾನಿಸಿ ಮುಂದೂಡಿದೆ.
ಗೌರವಕ್ಕೆ ಧಕ್ಕೆ ತಂದಿರುವ ಸಚಿವ ಶಿವರಾಮ್ ಹೆಬ್ಬಾರ್ 1 ರೂಪಾಯಿ ಮಾನನಷ್ಟ ಪರಿಹಾರ ನೀಡುವುದರ ಜೊತೆಗೆ ಭೇಷರತ್ ಕ್ಷಮೆಯಾಚಿಸಬೇಕು ಎಂದು ಚೇತನ್ ಆಗ್ರಹಿಸಿದ್ದಾರೆ. ಇತ್ತೀಚೆಗೆ ಸಚಿವ ಶಿವರಾಮ್ ಹೆಬ್ಬಾರ್ ಅವರು ‘ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿತು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ.’ ಎಂದು ಪೋಸ್ಟ್ ಹಾಕಿದ್ದರು.
ಅಲ್ಲದೇ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.’ ಎಂದಿದ್ದರು.