ಬೆಂಗಳೂರು : ವಿಧಾನಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮಧ್ಯೆ ವಾಗ್ಯುದ್ಧ ಮುಂದುವರಿದ ಕಾರಣ ಕಲಾಪವನ್ನು ಮುಂದೂಡಲಾಗಿದೆ. ನಿನ್ನೆ ರಮೇಶ್ ಕುಮಾರ್ ಮೇಲೆ ಸಚಿವ ಡಾ. ಸುಧಾಕರ್ ಆರೋಪ ಮಾಡಿದ ಬಳಿಕ ಉಂಟಾಗಿದ್ದ ಗಲಾಟೆ ಇವತ್ತು ಮುಂದುವರೆದಿದೆ. ಇವತ್ತು ರಮೇಶ್ ಕುಮಾರ್ ಸದಸನಕ್ಕೆ ಗೈರು ಹಾಜರಾಗಿದ್ದರಿಂದ ರಮೇಶ್ ಕುಮಾರ್ ಪಲಾಯನವಾದಿ ಎಂದು ಬಿಜೆಪಿಗರು ಘೋಷಣೆ ಹಾಕಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೆ ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ಸದಸ್ಯ ರಮೇಶ್ ಕುಮಾರ್ ಅವರ ಉಚ್ಚಾಟನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹ ಮಾಡಿದ್ರು. ಇದಕ್ಕೆ ಬಿಜೆಪಿಯ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಘೋಷಣೆ ಹಾಕಲು ಆರಂಭಿಸಿದರು.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಡಾ. ಸುಧಾಕರ್ ಮೇಲೆ ಹಕ್ಕುಚ್ಯುತಿ ಮಂಡನೆಗೆ ಮುಂದಾದರು. ಈ ವೇಳೆ ಸದನದಲ್ಲಿ ಬಿಜೆಪಿ ಸದಸ್ಯರ ಘೋಷಣೆ, ಕೂಗಾಟ ಹೆಚ್ಚಾಯ್ತು. ಸದನ ಹಿಡಿತಕ್ಕೆ ಸಿಗದ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅರ್ಧ ಗಂಟೆ ಮುಂದೂಡಿ ಸಂಧಾನ ಸಭೆಯನ್ನು ನಡೆಸುತ್ತಿದ್ದಾರೆ.