ತಿರುಪತಿಯ ಶ್ರೀನಿವಾಸ ಗೋವಿನ ರಕ್ಷಣೆಗೆ ಅವತರಿಸಿದವ. ಆದರೆ, ಆತನ ಪ್ರಸಾದದಲ್ಲಿ ಕೊಬ್ಬಿನಾಂಶ ಪತ್ತೆಯಾಗಿರುವುದು ನೋವಿನ ಸಂಗತಿ. ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕಲಬೆರಕೆಯ ತುಪ್ಪ ಬಳಸಿದ್ದಾರೆ. ಅದನ್ನು ತುಪ್ಪ ಎಂದು ಕರೆಯಲು ಸಾಧ್ಯವಿಲ್ಲ. ಈ ವಿಷಯ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅಯೋಧ್ಯೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ. ಇದು ಹಿಂದೂ ಸಮಾಜಕ್ಕೆ ಆಗಿರುವ ದೊಡ್ಡ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.
ಹಸುವನ್ನು ರಕ್ಷಿಸಿದ ಶ್ರೀನಿವಾಸನಿಗೆ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ಬಹುದೊಡ್ಡ ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ.