ಕಾಬೂಲ್ ವಿಮಾನ ನಿಲ್ದಾಣದಲ್ಲಿ 7 ದಿನಗಳಲ್ಲಿ ಕನಿಷ್ಠ 20 ಜನ ಸಾವು
ರಾಜಧಾನಿಯನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 7 ದಿನಗಳಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ರಾಜತಾಂತ್ರಿಕರು ಭಾನುವಾರ ತಿಳಿಸಿದ್ದಾರೆ.
ತಾಲಿಬಾನ್ ಸ್ವಾಧೀನದಿಂದ ಪಲಾಯನ ಮಾಡುವವರ ನಡುವೆ ಗೊಂದಲ ಆತಂಕ , ನೂಕಾಟ , ತಳ್ಳಾಟ , ಗಲಾಟೆ , ಗದ್ದಲದ ನಡುವೆ ಎಷ್ಟೋ ಜೀವಗಳು ಹೋಗಿವೆ.. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನಸಂದಣಿಯಲ್ಲಿ ಏಳು ಅಫಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬ್ರಿಟಿಷ್ ಮಿಲಿಟರಿ ಹೇಳಿದೆ.
ವಾರದ ಹಿಂದೆ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ರಾಜಧಾನಿ ನಗರದಲ್ಲಿ ಹದಗೆಟ್ಟಿರುವ ಭದ್ರತಾ ಪರಿಸ್ಥಿತಿಯ ನಡುವೆ ಐಎಎಫ್ ನ ಸೇನಾ ಸಾರಿಗೆ ವಿಮಾನದಲ್ಲಿ 107 ಭಾರತೀಯರು ಸೇರಿದಂತೆ 168 ಜನರನ್ನು ಭಾರತ ಭಾನುವಾರ ಸ್ಥಳಾಂತರಿಸಿದೆ.
ಮೊನ್ನೆ ಶನಿವಾರ, ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರು ಸಂಸತ್ ಸದಸ್ಯರು ಸೇರಿದಂತೆ ಕನಿಷ್ಠ 72 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳನ್ನು ತಾಲಿಬಾನ್ ಐಎಎಫ್ ವಿಮಾನ ಹತ್ತದಂತೆ ತಡೆದು, ಕಾಬೂಲ್ ವಿಮಾನ ನಿಲ್ದಾಣದಿಂದ ಹಿಂತಿರುಗಿಸಿದರು. ಭಾರತವು ಶನಿವಾರದಿಂದ 300 ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಿದೆ.








