ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ನಿನ್ನೆಯೂ ಸಹ ಜೈಲಿನಲ್ಲಿ ರಾಗಿಣಿ ಹಾಗೂ ಸಂಜನಾ ಗಲ್ರಾನಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇಂದೂ ಕೂಡ ಜೈಲಿಗೆ ತೆರಳಿದ ಇಡಿ ಅಧಿಕಾರಿಗಳ ತಂಡ ಇಬ್ಬರೂ ನಟಿಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಒಟ್ಟು ಐದು ದಿನಗಳ ವಿಚಾರಣೆಗೆ ಇಡಿ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ. ಕಳೆದ ವಾರ ಇಸಿಆರ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತೀವ್ರ ಡ್ರಿಲ್ ಮಾಡುತ್ತಿದ್ದಾರೆ.
ಡ್ರಗ್ಸ್ ಪೆಡ್ಲರ್‍ಗಳ ಜತೆ ರಾಗಿಣಿ ಹಾಗೂ ಸಂಜನಾ ನಂಟು ಹೊಂದಿರುವ ಬಗ್ಗೆ ಎನ್‍ಸಿಬಿ ಹಾಗೂ ಸಿಸಿಬಿ ನಡೆಸಿದ ತನಿಖೆ ಹಾಗೂ ವಿಚಾರಣೆ ವೇಳೆ ಸುಳಿವು ಸಿಕ್ಕಿತ್ತು. ಡ್ರಗ್ಸ್ ವ್ಯವಹಾರದಲ್ಲಿ ಅಕ್ರಮ ಹಣ ಹಾಗೂ ಹವಾಲಾ ಹಣ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇಬ್ಬರೂ ನಟಿಯರ ಹಿಂದೆ ಬಿದ್ದಿದ್ದಾರೆ.
ಇಬ್ಬರೂ ನಟಿಯರು ಅಕ್ರಮ ಹಣ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳೊಂದಿಗೆ ಜೈಲಿಗೆ ಬಂದು ವಿಚಾರಣೆ ನಡೆಸುತ್ತಿದ್ದು, ಸಿಸಿಬಿ ಸಂಕಷ್ಟದಿಂದ ಮುಕ್ತಿ ಸಿಕ್ಕರೂ ಇಡಿ ಗಾಳದಿಂದ ಹೊರಬರುವುದು ಕಷ್ಟ ಎನ್ನಲಾಗಿದೆ.
ರಾಗಿಣಿ, ಸಂಜನಾ ಜೊತೆಗೆ ಉಳಿದ ಆರೋಪಿಗಳಾದ ವಿರೇನ್ ಖನ್ನಾ, ರವಿಶಂಕರ್ ಹಾಗೂ ರಾಹುಲ್‍ನನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.