ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಹಕ್ಕೋತ್ತಾಯ ರಾಜ್ಯ ಸರ್ಕಾರಕ್ಕೆ ಮತ್ತೆ ತಲೆ ನೋವಾಗುವ ಸಾಧ್ಯತೆ ಇದೆ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಉಗ್ರ ಹೋರಾಟ ಆರಂಭವಾದ ಬೆನ್ನಲ್ಲೇ, ಲಿಂಗಾಯತ ಸಮುದಾಯಕ್ಕೆ ಶೇಕಡಾ 16ರಷ್ಟು ಮೀಸಲಾತಿಗೆ ಆಗ್ರಹಿಸಿ ಎಂಎಲ್‍ಸಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ಕೆಲ ತಿಂಗಳಿಂದ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿ ಸಂಸ್ಥಾನದ ಪ್ರಸನ್ನಾನಂದಪುರಿ ಸ್ವಾಮೀಜಿ ಹೋರಾಟ ಆರಂಭಿಸಿದ್ದರು ಆದರೆ, ರಾಜನಹಳ್ಳಿ ಗುರುಪೀಠದಿಂದ ರಾಜಧಾನಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಸತ್ಯಾಗ್ರಹ ಆರಂಭಿಸಿ, ಸರ್ಕಾರಕ್ಕೆ ಗಡುವು ನೀಡಿ ಹೋರಾಟ ತಾತ್ಕಾಲಿಕ ಅಂತ್ಯಗೊಳಿಸಿದ್ದರು. ಇಂದು ಸಂಜೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಸವರಾಜ ಹೊರಟ್ಟಿ ಲಿಂಗಾಯತರಿಗೆ ಮೀಸಲಾತಿಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿರುವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕು. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಶೇ.16ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಲಿಂಗಾಯತರಿಗೆ ಶೇ.16 ರಷ್ಟು ಮೀಸಲಾತಿ ಕೊಡಬೇಕು. ಈ ಬಗ್ಗೆ ಹಲವು ಬಾರಿ ಲಿಂಗಾಯತ ಸಮುದಾಯದ ಮುಖಂಡರು ತಮಗೆ ಮನವಿ ಕೊಟ್ಟಿದ್ದಾರೆ. ನೀವು ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ಮರೆಯಬಾರದು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನೀವು ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತೀರಿ ಎಂಬ ಮಾತಿದೆ. ಆ ಮಾತನ್ನು ಹೋಗಲಾಡಿಸಲು ಲಿಂಗಾಯರಿಗೆ ಶೇಕಡಾ 16ರಷ್ಟು ಮೀಸಲಾತಿ ಘೋಷಣೆ ಮಾಡಬೇಕು ಎಂದು ಲಿಂಗಾಯತ ಸಮುದಾಯದ ನಾಯಕರೂ ಆದ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಬಸವರಾಜ ಹೊರಟ್ಟಿ ಪತ್ರದಲ್ಲೇನಿದೆ..
ಕರ್ನಾಟಕದಲ್ಲಿರುವ ಹಿಂದೂ ಮರಾಠ ಸಮಾಜಕ್ಕೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಸಮಸ್ತ ಲಿಂಗಾಯತರ ವೇದಿಕೆ ಸ್ವಾಗತಿಸುತ್ತದೆ. ಇದು ಬಹಳ ದಿನಗಳ ಬೇಡಿಕೆಯಾಗಿತ್ತು ಎಂದಿರುವ ಹೊರಟ್ಟಿ, ಕರ್ನಾಟಕದಲ್ಲಿ ಅನೇಕ ದಿನಗಳಿಂದ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ಕೊಡಬೇಕೆಂದು ಹತ್ತು ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠ ಸಮಾಜಕ್ಕೆ ಶೇ.16ರಷ್ಟು ಮೀಸಲಾತಿಯನ್ನು ನೀಡಿ ಆ ಸಮಾಜ ಎಲ್ಲ ಅನುಕೂಲತೆಯನ್ನು ಪಡೆಯುತ್ತಿದೆ. ಆದರೆ, ಅಲ್ಲಿ ಮರಾಠ ಸಮುದಾಯ ದೊಡ್ಡ ಸಂಖ್ಯೆಯಲ್ಲಿರುವಂತೆ ಕರ್ನಾಟಕದಲ್ಲಿಯೂ ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಶೇ.16ರಷ್ಟು ಮೀಸಲಾತಿಯನ್ನು ಕೊಡುವುದು ಯೋಗ್ಯವಲ್ಲವೇ ? ಇಡೀ ಕರ್ನಾಟಕದ ಸಮಸ್ತ ಲಿಂಗಾಯತರ ಹೋರಾಟ ವೇದಿಕೆ ತಮ್ಮನ್ನು ಭೇಟಿಯಾಗಿ ಶೇ.16ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಕೇಳಿಕೊಂಡರೂ ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿಲ್ಲ.

ಹಿಂದೆ ನಡೆದ ಹಲವು ಚುನಾವಣಾ ಪ್ರಚಾರಗಳಲ್ಲಿ ಲಿಂಗಾಯತರ ಒಂದು ಮತವೂ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಬಾರದು ಎಂದು ಹೇಳಿರುವ ನೀವು ಲಿಂಗಾಯತರಿಗೆ ಮಾಡಿದ್ದೇನು. ತಾವು ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ಮುಖ್ಯಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ಸಹ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. `ಹಿತ್ತಲ ಗಿಡ’ ಮದ್ದಲ್ಲ ಎಂದು ಹೇಳುವ ಗಾದೆ ಮಾತಿನಂತೆ ನೀವು ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತಾರೆಂಬುದು ಅನೇಕರ ಅಹವಾಲು. ಈ ದಿಸೆಯಲ್ಲಿ ನೀವು ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿಯನ್ನು ಎಂಬುದು ಸಮಸ್ತ ಲಿಂಗಾಯತರ ಬೇಡಿಕೆಯಾಗಿದೆ. ನೀವು ಲಿಂಗಾಯತರಾದ ಮೇಲೆ ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿ ದೊರೆಯುತ್ತದೆಂದು ಸಮುದಾಯದ ಜನರು ನಿರೀಕ್ಷೆಯಲ್ಲಿದ್ದರು. ಈಗ ಅವರೆಲ್ಲರಿಗೂ ನಿರಾಸೆಯಾಗಿದೆ. ಬೇರೆ ಬೇರೆ ಸಮುದಾಯದವರು ತಮಗೆ ಹೆಚ್ಚು ಹೆಚ್ಚು ಮೀಸಲಾತಿಯನ್ನು ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಗಳು ನ್ಯಾಯಯುತವಾಗಿರುವುದರಿಂದ ಅದಕ್ಕೆ ಅವರು ಒತ್ತಾಯ ಮಾಡುತ್ತಿದ್ದಾರೆ ಜಾತ್ಯತೀತ ರಾಷ್ಟ್ರವಾದರೂ ಜಾತ್ಯತೀತ ಮನೋಭಾವನೆ ಹೊಂದಿದ ಕರ್ನಾಟಕದಲ್ಲಿಯೂ ಎಲ್ಲವೂ ಜಾತಿಯ ಆಧಾರದಲ್ಲಿಯೇ ನಡೆಯುತ್ತಿದೆ. ತಮಿಳುನಾಡು ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದಾರೆ. ಲಿಂಗಾಯತರಲ್ಲಿಯೂ ಶೇ.100ರಲ್ಲಿ 70ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಲಿಂಗಾಯತ ಸಮಾಜದವರು ಕೃಷಿಯನ್ನು ಅವಲಂಬಿಸಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಪ್ರಕೃತಿ ವಿಕೋಪದಿಂದ ಇವರ ಜೀವನ ಏರುಪೇರಾಗಿ ಸದಾ ಕಷ್ಟವನ್ನೇ ಅನುಭವಿಸುತ್ತಿರುವ ಈ ಸಮಾಜಕ್ಕೆ ಮೀಸಲಾತಿ ಕೊಡುವುದು ನ್ಯಾಯ ಸಮ್ಮತವಾಗಿದೆ. ಎಲ್ಲರೂ ಅಧಿಕಾರವಿದ್ದಾಗ ತಮ್ಮ ತಮ್ಮ ಸಮುದಾಯ, ಸಮಾಜದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ. ಅದರಂತೆ ನೀವೇಕೆ ಕಾಳಜಿ ವಹಿಸಬಾರದು ?
ಮೇಲಿನ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿಯನ್ನು ನೀಡಬೇಕು. ನೀವು ಈಗ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಿ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಬಸವರಾಜ ಹೊರಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








