ಚಿಕ್ಕಮಗಳೂರು: ಸಚಿವ ಸಂಪುಟ ವಿಸ್ತರಣೆ ಬಂಡಾಯ ಹಾಗೂ ಖಾತೆ ಹಂಚಿಕೆ ಅಸಮಾಧಾನ ಇನ್ನೂ ತಣ್ಣಗಾಗದ ಹಿನ್ನೆಲೆಯಲ್ಲಿ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನವರೆಗೆ ಚಿಕ್ಕಮಗಳೂರಿನ ಸರಾಯ್ ರೆಸಾರ್ಟ್ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ. ಜಲಸಂಪನ್ಮೂಲ ಸಚಿವÀ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಸೇರಿ ಕೆಲವರು ಭಾಗಿಯಾಗಿದ್ದರೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಶಾಸಕ ಎಂ.ಪಿ ಕೂಡ ಪಾಲ್ಗೊಂಡಿದ್ದು ವಿಶೇಷ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಹಲವು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಜತೆಗೆ ಖಾತೆ ಹಂಚಿಕೆಯಲ್ಲೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ನೂತನ ಸಚಿವರು ಕ್ಯಾಬಿನೆಟ್ಗೆ ಹೋಗದೇ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ದೂರದ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ನಡೆಸಿದ ರಹಸ್ಯ ಸಭೆಯ ಮರ್ಮವೇನು ಎಂಬುದು ರಾಜ್ಯ ರಾಜಕೀಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ರಹಸ್ಯ ಸಭೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸಚಿವ ಸಿ.ಪಿ ಯೋಗೇಶ್ವರ್ ರೆಸಾರ್ಟ್ನಿಂದ ನಿರ್ಗಮಿಸಿದ್ದಾರೆ. ಯೋಗೇಶ್ವರ್ ನಂತರ ರಮೇಶ್ ಜಾರಕಿಹೊಳಿ, ಎಂ.ಪಿ ಕುಮಾರಸ್ವಾಮಿ ಕೂಡ ನಿರ್ಗಮಿಸಿದ್ದಾರೆ.
ರಹಸ್ಯೆ ಸಭೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಎತ್ತಿನ ಹೊಳೆ ಯೋಜನೆ ಹಾಗೂ ಬೇಲೂರು ಕೆರೆಗೆ ನೀರು ಹರಿಸುವ ವಿಚಾರವಾಗಿ ಯೋಗೇಶ್ವರ್ ನಾನು ಚರ್ಚೆ ಮಾಡಿದ್ದೇವೆ. ಇಲ್ಲಿಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ದಿ.ಸಿದ್ದಾರ್ಥ ಅವರು ನಮ್ಮ ಆತ್ಮೀಯ ಸ್ನೇಹಿತರು. ಎಸ್.ಎಂ ಕೃಷ್ಣ ಅವರು ನಮ್ಮ ರಾಜಕೀಯ ಗುರುಗಳು. ಹೀಗಾಗಿ ಅವರ ಒಡೆತನದ ರೆಸಾರ್ಟ್ಗೆ ಬಂದಿದ್ದೇವೆ ಅಷ್ಟೇ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಪ್ಪೆ ಸಾರಿದ್ದಾರೆ.
ರಮೆಶ್ ಜಾರಕಿಹೊಳಿ ಜೊತೆ ಯಾವುದೇ ರಾಜಕೀಯ ಸಭೆ ನಡೆದಿಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಸಚಿವ ಸ್ಥಾನ ಸಿಗದೇ ಇದ್ದದ್ದು ಸದ್ಯ ಅಪ್ರಸ್ತುತ. ಸಚಿವ ಜತೆ ಅಭಿವೃದ್ಧಿ ದೃಷ್ಟಿಯಿಂದ ಭೇಟಿ ಮಾಡಿ ಮಾತನಾಡಿದ್ದೇನೆ. ರಾಜಕೀಯವಾಗಿ ಯಾವುದೇ ಚರ್ಚೆ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ಬೆಂಗಳೂರಿನಲ್ಲೇ ಇದ್ದೇನೆ..
ನಾನು ಸೇರಿ ಯಾರೂ ರೆಸಾರ್ಟ್ನ ರಹಸ್ಯ ಸಭೆಯಲ್ಲಿ ಪಾಲ್ಗೊಂಡಿಲ್ಲ. ನಾನು ಬೆಂಗಳೂರಿನ ಮನೆಯಲ್ಲಿ ಬೆಳಿಗ್ಗೆಯಿಂದ ಇದ್ದೇನೆ. ಮನೆಯಲ್ಲೇ ಅಧಿಕಾರಿಗಳು, ಮುಖಂಡರ ಸಭೆ ನಡೆಸುತ್ತಿದ್ದೇನೆ. ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಪ್ರವಾಸದ ವೇಳೆ ಭೇಟಿಯಾಗಿರಬಹುದು ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel