ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ.. ಇದು ಇಸ್ರೇಲಿ ಮಾದರಿಯ ಸ್ಕೀಮ್ ಆಗಿದೆ.. ಆದ್ರೆ ಉತ್ತರದಲ್ಲಿ ಇದರ ವಿರುದ್ಧ ಹಿಂಸಾಚಾರ ಭುಗಿಲೆದ್ದಿದೆ.. ಉತ್ತರದಲ್ಲಷ್ಟೇ ಅಲ್ಲ ದಕ್ಷಿಣದಲ್ಲೂ ಪ್ರತಿಭಟನಾ ಕಾವು ಜೋರಾಗಿದ್ದು , ಈ ವರೆಗೂ ಪ್ರತಿಭಟನೆಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ..
ದೇಶದ ಪ್ರಮುಖ ರೈಲು ಜಂಕ್ಷನ್ ಗಳ ಪೈಕಿ ಒಂದಾದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲೂ ಪ್ರತಿಭಟನೆ ಜೋರಾಗಿದೆ.. ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ನೇಮಕಾತಿ ಯೋಜನೆ ವಿರುದ್ಧ ದೇಶದಾದ್ಯಂತ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದು, ಹಲವು ಕಡೆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಸಿಕಂದರಾಬಾದ್ ನಲ್ಲಿಯೂ ಶುಕ್ರವಾರ ಇದೇ ಗಲಾಟೆ ಮುಂದುವರಿಯಿತು. ಉದ್ರಿಕ್ತ ಗುಂಪು ರೈಲ್ವೆ ಜಂಕ್ಷನ್ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಮೂಲಕ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಆದರೆ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಗುಂಡು ಹಾರಿಸಬೇಕಾಯಿತು. ಈ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಯುವಕನಿಗೆ ಸರ್ಕಾರಿ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದೇ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಅಜಂತಾ ಎಕ್ಸ್ಪ್ರೆಸ್ನ ಎರಡು ಬೋಗಿಗಳಿಗೆ ಬೆಂಕಿ ಇಟ್ಟಿದ್ದು , ಅದರಲ್ಲಿದ್ದ ಕೆಲವು ಬೈಕ್ಗಳು ಸೇರಿದಂತೆ ಪಾರ್ಸೆಲ್ ವಸ್ತುಗಳು ಬೆಂಕಿಗೆ ಆಹುತಿಯಾದವು.
ಕೆಲವು ಎಸಿ ಕೋಚ್ಗಳ ಗಾಜಿನ ಕಿಟಕಿಗಳನ್ನು ಕೂಡ ಒಡೆದು ಹಾಕಲಾಯಿತು. ಒಳಗೆ ಕುಳಿತಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಓಡಿದರು.