ಅಗ್ನಿಪಥ್ ನೇಮಕಾತಿ – 6 ದಿನಗಳಲ್ಲಿ 1.83 ಲಕ್ಷ ಅರ್ಜಿ ಸ್ವೀಕರಿಸಿದ ವಾಯುಸೇನೆ…
ಭಾರತೀಯ ಸೇನೆಯ ನೂತನ ನೇಮಕಾತಿ ಯೋಜನೆ ಅಗ್ನಿಪಥ್ ಗೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ನೇಮಕಾತಿ ಅಧಿಸೂಚನೆ ಪ್ರಾರಂಭವಾದ ಕೇವಲ 6 ದಿನಗಳಲ್ಲಿ ವಾಯುಸೇನೆ 1.83 ಲಕ್ಷ ಅರ್ಜಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭವಾದ ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು IAF ಟ್ವೀಟ್ ಮಾಡಿ ತಿಳಿಸಿದೆ. ಜೂನ್ 24 ರಂದು ಆರಂಭವಾದ ನೋಂದಣಿ ಪ್ರಕ್ರಿಯೆಯಲ್ಲಿ ಸೋಮವಾರದ ವೇಳೆಗೆ 94,281 ಅರ್ಜಿಗಳು ಮತ್ತು ಭಾನುವಾರದ ವೇಳೆಗೆ 56,960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಐಎಎಫ್, ‘ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್‌ಗಳು ನೋಂದಣಿ ವೆಬ್‌ಸೈಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ರಂದು ನೋಂದಣಿ ಮುಕ್ತಾಯವಾಗುತ್ತದೆ’ ಎಂದು ತಿಳಿಸಿದೆ.
ಯೋಜನೆಯಡಿಯಲ್ಲಿ 17.5 ರಿಂದ ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಕಾಲ ಸೇನೆಗೆ ಸೇರಿಸಲಾಗುವುದು. ಅಗ್ನಿವೀರ್ ರಲ್ಲಿ 25 ಪ್ರತಿಶತದಷ್ಟು ನಂತರ ನಿಯಮಿತ ಸೇವೆಗೆ ಸೇರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.








