ಅಗ್ನಿಪಥ್ ಯೋಜನೆ ನೇಮಕಾತಿಗೆ ಗರಿಷ್ಠ ವಯಸ್ಸು 23ಕ್ಕೆ ಏರಿಸಿದ ಕೇಂದ್ರ….
ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರವು ಇತ್ತೀಚೆಗೆ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಅನುಮತ್ತಿಸಿತ್ತು. ಆದರೆ ಹೊಸ ಸೇನಾ ನೇಮಕಾತಿ ಯೋಜನೆಗೆ ಉತ್ತರ ಭಾರತದ ಹಲವೆಡೆ ವಿರೋಧ ವ್ಯಕ್ತವಾಗಿದ್ದರಿಂದ ಹಿನ್ನಡೆಯನ್ನ ಅನುಭವಿಸುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಅಗ್ನಿವೀರರನ್ನ ನೇಮಿಸಿಕೊಳ್ಳಲು ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.
ಸ್ತುತ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿರುವ ಸರ್ಕಾರವು ಗರಿಷ್ಟವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಕ್ಕೆ ಏರಿಕೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಸೇನಾ ನೇಮಕಾತಿ ನಡೆದಿಲ್ಲದಿರುವುದರಿಂದ ಈ ಒಂದು ಬಾರಿ ಗರಿಷ್ಟ ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗಿದೆ.
ಈ ಕುರಿತು ಪಿಐಬಿ ಟ್ವೀಟ್ ಮಾಡಿದ್ದು “2022ರ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಲಾಗಿದ್ದು 2022 ಕ್ಕೆ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ.” ಎಂದು ಟ್ವೀಟ್ ಮಾಡಿದೆ.
ಜೂನ್ 14 ರಂದು, ಕೇಂದ್ರ ಸಚಿವ ಸಂಪುಟವು ಭಾರತೀಯ ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಆಕರ್ಷಕ ನೇಮಕಾತಿ ಯೋಜನೆಯನ್ನು ಅನುಮೋದಿಸಿತು. ಈ ಯೋಜನೆಯನ್ನು ಅಗ್ನಿಪಥ್ ಎಂದು ಕರೆಯಲಾಗುತ್ತದೆ ಮತ್ತು ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.