ಬೆಂಗಳೂರು: ನಗರದ ಪ್ರೆಸ್ ಕ್ಲಬ್‌ನಲ್ಲಿ ಅನಿವಾಸಿ ಭಾರತೀಯ ಕನ್ನಡತಿ ಶ್ರೀಮತಿ ಜ್ಯೋತ್ಸ್ನಾ ಕಾಸು ಅವರ ಸೈಬರ್ ವಿಚಾರ ಸಂಬಂಧಿತ ಪುಸ್ತಕದ ಕನ್ನಡ ಆವೃತ್ತಿ, “ಅಗೋಚರ ಜಾಲ”ದ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಮೂಲ ಇಂಗ್ಲೀಷ್ ಕೃತಿಯಾದ “ದಿ ಆರ್ಟ್ ಆಫ್ ಬೀಯಿಂಗ್ ಇನ್ವಿಸಿಬಲ್” ಪುಸ್ತಕದ ಭಾವಾನುವಾದ ಕೃತಿ ಅನೌಪಚಾರಿಕವಾಗಿ ಈಗಾಗಲೇ ಬಿಡುಗಡೆಯಾಗಿದ್ದು, ವಂಶಿ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಹೊರತಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಲ ಕೃತಿಯ ಲೇಖಕಿ ಜ್ಯೋತ್ಸ್ನಾ ಕಾಸು, ಸೈಬರ್ ತಂತ್ರಜ್ಞಾನ ದಿನೇ ದಿನೇ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ನಿಟ್ಟಿನಲ್ಲಿ ನಮಗೆ ಎದುರಾಗಲಿರುವ ಅಪಾಯಗಳೂ ಸಹ ಹಲವು ಸ್ವರೂಪಗಳನ್ನು ಪಡೆದುಕೊಂಡು ದಾಳಿಮಾಡಲಿವೆ. ಸೈಬರ್ ಅಪರಾಧ ಅಥವಾ ಹ್ಯಾಕಿಂಗ್ ಅಥವಾ ಅಗೋಚರ ದಾಳಿ ಅನ್ನುವುದು ಒಂದು ರೀತಿಯ ಅಪ್ರತ್ಯಕ್ಷ ಯುದ್ಧವಾಗಿದ್ದು, ಇದಕ್ಕೆ ನಾವೆಲ್ಲರೂ ಬಲಿಪಶುಗಳಾಗುವ ಭೀತಿಯಿದೆ. ಈ ದೃಷ್ಟಿಯಲ್ಲಿ ಭವಿಷ್ಯದಲ್ಲಿ ಸೈಬರ್ ಪ್ರಪಂಚದಲ್ಲಿ ಯಾವ ತರಹದ ಅಪಾಯಗಳು ಕಾದಿವೆ ಎಂಬುದರ ಕುರಿತು ಈ ಪುಸ್ತಕ ಮುನ್ಸೂಚನೆ ನೀಡುತ್ತದೆ ಎಂದರು. ಕಂಪ್ಯೂಟರ್ ತಂತ್ರಜ್ಞಾನ ನಮಗೆ ಇಂದು ಎಷ್ಟು ಅಗತ್ಯವೋ, ಅಷ್ಟೇ ಅನಿವಾರ್ಯವೂ ಆಗಿದೆ ಜೊತೆಗೆ ಈ ತಂತ್ರಜ್ಞಾನದ ಬೆಳವಣಿಗೆಯ ಬೆನ್ನಲ್ಲೆ ಅನೇಕ ರೀತಿಯ ಬೆದರಿಕೆಗಳನ್ನೂ ನಾವು ಸ್ವೀಕರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಏನೂ ಅರಿಯದ ಅಮಾಯಕ ಕಂಪ್ಯೂಟರ್ ಬಳಕೆದಾರರಿಗೆ ಮಾರ್ಗದರ್ಶಿಯಾಗಲಿ ಎಂಬ ಕಾರಣಕ್ಕೆ ಇಂಗ್ಲೀಷ್ ನಲ್ಲಿದ್ದ ಈ ಪುಸ್ತಕವನ್ನು ಕನ್ನಡ, ತೆಲುಗು ಮತ್ತು ಹಿಂದಿ ಮುಂತಾದ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ ಎಂದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪುಸ್ತಕವನ್ನು ಕನ್ನಡ ಭಾಷೆಗೆ ಅನುವಾದಿಸಿದ ಪತ್ರಕರ್ತ, ಲೇಖಕ ವಿಶ್ವಾಸ್ ಭಾರದ್ವಾಜ್ ಮಾತನಾಡಿ, ನಾವಿಂದು ವರ್ಚುಯೆಲ್ ವಿಶ್ವದ ಕೋಣೆಯಲ್ಲಿ ಬಂಧಿಗಳಾಗಿದ್ದೇವೆ. ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ ಹಾಗೆಯೇ ನಮ್ಮ ಕಣ್ಣಿಗೆ ಕಾಣದ ಅದೃಶ್ಯ ಶತ್ರುಗಳೂ ಹೆಚ್ಚಾಗುತ್ತಿದ್ದಾರೆ ಎಂದರು. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ಹ್ಯಾಕರ್ ನಮ್ಮ ಕಂಪ್ಯೂಟರ್ ಒಳಗೆ ಪ್ರವೇಶ ಪಡೆದು ನಮ್ಮ ಡೇಟಾ ದೋಚುತ್ತಾನೆ, ನಮ್ಮ ನೆಮ್ಮದಿ ಹಾಳುಮಾಡುತ್ತಾನೆ. ಇಂತಹ ಅನೇಕ ಸಂಭಾವ್ಯ ಅಪಾಯಗಳ ಕುರಿತಾಗಿ ಈ ಪುಸ್ತಕ ಬೆಳಕು ಚೆಲ್ಲಿದೆ. ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಅಮೇರಿಕಾದಲ್ಲಿದ್ದರೂ ಜ್ಯೋತ್ಸ್ನಾ ಅವರ ಅಪರಿಮಿತ ಉತ್ಸಾಹದ ಕಾರಣದಿಂದ ಇಂದು ಇಂತಹದ್ದೊಂದು ಅತೀ ಅಗತ್ಯವಾದ ಪುಸ್ತಕ ಕನ್ನಡಕ್ಕೆ ಬಂದಿದೆ. ಇದು ಇವತ್ತು ಸ್ಮಾರ್ಟ್ ಡಿವೈಸ್, ಲ್ಯಾಪ್ ಟಾಪ್, ಕಂಪ್ಯೂಟರ್ ಬಳಕೆ ಮಾಡುತ್ತಿರುವ ಎಲ್ಲಾ ವಯೋಮಾನದವರ ಕೈಪಿಡಿಯಾಗುವಂತದ್ದು. ಈಗ ತಾನೆ ಡಿಜಿಟಲ್ ಜಗತ್ತಿಗೆ ಅಂಬೆಗಾಲಿಡುವ ಪ್ರೌಢ ವಯಸ್ಕರಿಗೆ ದಾರಿ ತೋರಿಸುವ ದೀವಟಿಗೆ ಹಾಗೂ ಸೈಬರ್ ಅಪರಾಧಗಳ ಕುರಿತಾಗಿ ತನಿಖೆ ಮಾಡುವ ಪೊಲೀಸ್ ಇಲಾಖೆಗೂ ದಿಕ್ಸೂಚಿಯಾಗುವ ಪುಸ್ತಕ ಎಂದರು.
ಇದೇ ವೇಳೆ ಸಾಯಿ ಬಾಬಾರ ಏಳು ಪವಾಡಗಳು, ಸಾಯಿ ಚಾಲೀಸ್, ಭಜನೆ, ಆರತಿ ಗೀತೆಗಳು, ಅಭಂಗ್, ಸಾಯಿ ಸಂದೇಶಗಳನ್ನೊಳಗೊಂಡ “ಸಾಯಿ ಸ್ಮೃತಿ”ಯ ಕುರಿತಾಗಿಯೂ ಮಾಹಿತಿ ಹಂಚಿಕೊಳ್ಳಲಾಯಿತು. ಕರ್ನಾಟಕದ ಪ್ರತಿ ಜಿಲ್ಲೆ ಪ್ರತಿ ತಾಲೂಕಿನ ಪೊಲೀಸ್ ಠಾಣೆಗಳಿಗೆ, ಪ್ರಮುಖ ಪ್ರೌಢಶಾಲೆ-ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕ ತಲುಪಿಸುವುದಾಗಿ ಜ್ಯೋತ್ಸ್ನಾ ಮತ್ತು ವಿಶ್ವಾಸ್ ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಓಪೆಲ್ ಸಂಸ್ಥೆಯ ರಾಘವೇಂದ್ರ, ಬೆಳ್ಳಿ ಕ್ರಿಯೇಷನ್ಸ್‌ನ ಅಂಬಿಕಾ, ಶಿರಡಿ ಸಾಯಿ ಇಂಟರ್‌ನ್ಯಾಷನಲ್ ಫೌಂಡೇಷನ್‌ನ ವಿಠ್ಠಲ್ ಉಪಸ್ಥಿತರಿದ್ದರು.