ಅಧಿಕಾರಿಗಳಲ್ಲಿಯೂ ಕೃಷಿ ಆಸಕ್ತಿ ಶ್ಲಾಘನೀಯ : ಬಿ.ಸಿ.ಪಾಟೀಲ್
ಬೆಂಗಳೂರು : ಅಧಿಕಾರಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ರೈತೋಪಯೋಗಿ ಭಾವನೆಯಿರುವುದು ಹೆಮ್ಮೆಯ ವಿಷಯವೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಶ್ಲಾಘಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದಿಂದ ಕೃಷಿ ಇಲಾಖೆ,ಕೃಷಿಕ ಸಮಾಜದ ಸಹಯೋಗದಲ್ಲಿ ಇಂದಿನಿಂದ ಡಿ.5ರವರೆಗೆ ಹಮ್ಮಿಕೊಂಡಿರುವ “ಸಾವಯವ ಮತ್ತು ಸಿರಿಧಾನ್ಯ” ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಕೆಎಎಸ್ ಅಧಿಕಾರಿಗಳೆಲ್ಲ ನಮ್ಮ ಮಣ್ಣಿನ ಮಕ್ಕಳೇ.ಅಧಿಕಾರಿಗಳಲ್ಲಿಯೂ ಕೃಷಿ ಅದರಲ್ಲಿಯೂ ಸಿರಿಧಾನ್ಯ ಸಾವಯವ ಬಗ್ಗೆ ಆಸಕ್ತಿ ಬಂದಿರುವುದು ಸಂತಸದ ವಿಚಾರ.ಸಿರಿಧಾನ್ಯದ ಸಿರಿತನ ಹೆಚ್ಚುತ್ತಿದೆ.
ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಆಹಾರದ ಸಿದ್ಧ ಔಷಧಿಯಾಗಿದೆ.ಸಾವಯವ ಬಿಟ್ಟು ಹೆಚ್ಚು ರಾಸಾಯನಿಕ ವಸ್ತು ಬಳಕೆಯಿಂದ ರೈತರು ಹೆಚ್ಚು ಆರೋಗ್ಯಕ್ಕೆ ಖರ್ಚು ಮಾಡುವಂತಹ ಸ್ಥಿತಿ ಉದ್ಭವಿಸಿದೆ.
ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಸಿಗುತ್ತಿದ್ದು,ಸರ್ಕಾರ ಕೂಡ ಈ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಹುಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಕೃಷಿ ಖುಷಿಯಾಗಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕೆಂದರು.
ಮೇಳದಲ್ಲಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಗಳು ಪ್ರದರ್ಶನಕ್ಕಿಟ್ಟ ಸಾವಯವ ಕೋಕಮ್ ಸೇರಿದಂತೆ ಮತ್ತಿತ್ತರ ಸಿರಿಧಾನ್ಯದ ಖಾದ್ಯಗಳ ಸ್ವಾದಿಸಿ ಪ್ರೋತ್ಸಾಹಿಸಿದರು.