ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್…!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಸದ್ಯ 1-1ರಿಂದ ಸಮಬಲದಲ್ಲಿದೆ. ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳು ಗುಜರಾತಿನ ಮೊಟೇರಾ ಅಂಗಣದಲ್ಲಿ ನಡೆಯಲಿದೆ.
ಅದ್ರಲ್ಲೂ ಫೆಬ್ರವರಿ 24ರಿಂದ ಗುಜರಾತಿನ ಮೊಟೇರಾ ಅಂಗಣದಲ್ಲಿ ಶುರುವಾಗಲಿದೆ. ಹೊನಲು ಬೆಳಕಿನಡಿಯಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹಾಗೇ ಈ ಟೆಸ್ಟ್ ಪಂದ್ಯ ಪ್ರತಿಷ್ಠೆ ಪಂದ್ಯವಾಗಿದೆ. ಈಗಾಗಲೇ ಭಾರತದ ನೆಲದಲ್ಲಿ ನಡೆಯುತ್ತಿರುವ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದಾಗಿದೆ. ಈ ಹಿಂದೆ ಕೊಲ್ಕತ್ತಾದಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದಿತ್ತು.
ಇನ್ನು ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ಕಲ್ಪಿಸಲಾಗಿದೆ. ಶೇ 50ರಷ್ಟು ಪ್ರೇಕ್ಷಕರು ಈ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಬಹುದು.
ಹಾಗೇ ಪಂದ್ಯದ ಟಿಕೇಟ್ ಸೋಲ್ಡ್ ಔಟ್ ಆಗಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಕೋವಿಡ್ 19 ನಂತರ ಚೆನ್ನೈ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗಿತ್ತು.
ಇದೀಗ ಮೊಟೇರಾ ಮೈದಾನದಲ್ಲಿ ಅವಕಾಶ ನೀಡಲಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈ ಪಂದ್ಯವನ್ನು ಹೆಚ್ಚಿನ ಮುತುವರ್ಜಿಯಿಂದ ನೋಡಿ ಕೊಳ್ಳುತ್ತಿದ್ದಾರೆ. ಹಾಗೇ ಆರೋಗ್ಯದಲ್ಲಿ ಚೇತರಿಸಿಕೊಂಡಿರುವ ಸೌರವ್ ಗಂಗೂಲಿ ಅವರು ಪಂದ್ಯದ ಸಿದ್ಧತೆಯ ಬಗ್ಗೆ ಕಾರ್ಯದರ್ಶಿ ಜೈ ಶಾ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಪ್ರತಿ ಟೆಸ್ಟ್ ಸರಣಿಯಲ್ಲೂ ಅಳವಡಿಸಿಕೊಳ್ಳಲಾಗುವುದು. ಟೆಸ್ಟ್ ಪಂದ್ಯಗಳನ್ನು ಜೀವಂತವಾಗಿರಿಸಿಕೊಳ್ಳಲು ಈ ರೀತಿಯ ಬದಲಾವಣೆಗಳು ಅಗತ್ಯ ಎಂದು ಗಂಗೂಲಿ ಹೇಳಿದ್ದಾರೆ.
ಇನ್ನೊಂದೆಡೆ ಮುಂದಿನ ದಿನಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಹೀಗಾಗಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲ ಪ್ಲಸ್ ಪಾಯಿಂಟ್ ಆಗಿದೆ. ಭಾರತದಲ್ಲಿ ಕ್ರಿಕೆಟ್ ಪಂದ್ಯ ಮತ್ತೆ ನಾರ್ಮಲ್ ಹಂತಕ್ಕೆ ಬಂದಿದೆ. ಖುಷಿಯಾಗುತ್ತಿದೆ ಅಂತಾರೆ ಗಂಗೂಲಿ.
ಟೀಮ್ ಇಂಡಿಯಾದ ಮಾಜಿ ನಾಯಕ ಇತ್ತಿಚೆಗೆ ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಪಟ್ಟಿದ್ದರು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಫಿಟ್ ಆಂಡ್ ಫೈನ್. ಮತ್ತೆ ಕೆಲಸದಲ್ಲಿ ನಿರತನಾಗಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.