ಪಕ್ಷಕ್ಕಾಗಿ ರಾಷ್ಟ್ರ ರಾಜಕಾರಣಕ್ಕೆ ಹುಲಿಯಾ | ಸಿದ್ದುಗೆ ಎಐಸಿಸಿ ಅಧ್ಯಕ್ಷ ಪಟ್ಟ..?
ಬೆಂಗಳೂರು : ಪಕ್ಷಕ್ಕಾಗಿ ಹುಲಿಯಾ ಸಿದ್ದರಾಮಯ್ಯ ರಾಷ್ಟ ರಾಜಕಾರಣಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆ ಸದ್ಯ ಕಾಂಗ್ರೆಸ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಸಿಡಬ್ಲ್ಯುಸಿ ನಡೆಯಲಿದ್ದು, ಮುಂದಿನ ನಾಯಕತ್ವದ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಮುಂದಿನ ಎಐಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಸಿದ್ದುಗೆ ಎಐಸಿಸಿ ಅಧ್ಯಕ್ಷ ಪಟ್ಟ..?
ಹೌದು..! ರಾಜ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಯಶಸ್ವಿ ಆಡಳಿತ ನೀಡಿದ ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವನೆ ಈ ಮುನ್ನೆಲೆಗೆ ಬಂದಿದೆ. ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆ ಪಕ್ಷದ ಚಟುವಟಿಕೆಗಳಿಗೆ ದೂರ ಇದ್ದಾರೆ. ಅತ್ತ ರಾಹುಲ್ ಗಾಂಧಿ ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರು ಮುಂಚೂಣಿಯಲ್ಲಿದ್ದರೂ, ಈ ಬಾರಿ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯನ್ನು ಈ ಬಾರಿ ಎಐಸಿಸಿ ಉದ್ದೆಗೆ ಪರಿಗಣಿಸುವುದಾಗಿ ಹೇಳುವ ಮೂಲಕ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಹೀಗಾಗಿ ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಕಾಂಗ್ರೆಸ್ ನ ಬಾಸ್ ಮಾಡಲು ಎಲ್ಲ ರೀತಿಯ ತಯಾರಿಗಳು ನಡೆಯುತ್ತಿದ್ದು, ಪ್ರಮುಖವಾಗಿ ಸಿದ್ದರಾಮಯ್ಯ ಅವರ ಹೆಸರು ಚರ್ಚೆಗೆ ಬಂದಿದೆ.
ಸಿದ್ದರಾಮಯ್ಯ ಯಾಕೆ..?
130ಕ್ಕೂ ಹೆಚ್ಚು ಇತಿಹಾಸಯುಳ್ಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದು ಸಾಮಾನ್ಯದ ವಿಷ್ಯವಲ್ಲ. ಎಐಸಿಸಿ ಅಧ್ಯಕ್ಷ ಹುದ್ದೆ ಅತ್ಯಂತ ಪ್ರಮುಖ ಹಾಗೂ ಜವಾಬ್ದಾರಿ ಹುದ್ದೆಯಾಗಿದ್ದು, ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಇದು ಸವಾಲಿನ ಜವಾಬ್ದಾರಿ ಕೂಡ ಹೌದು. ಬೇರೆ ಬೇರೆ ರಾಜ್ಯಗಳಲ್ಲಿರುವ ಪ್ರಭಾವಿ ನಾಯಕರು, ಪ್ರಮುಖ ಮುಖಂಡರು ಅಧ್ಯಕ್ಷಗಾದಿಗೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕರ್ನಾಟಕದ ಪ್ರಮುಖ ನಾಯಕರ ಹೆಸರುಗಳೇ ಎಐಸಿಸಿ ಗಾದಿಗೆ ಪದೇ ಪದೇ ಕೇಳಿಬರುತ್ತಿದೆ. ಅದರಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೂಡ ಇದೆ. ಆದ್ರೆ ಸಿದ್ದರಾಮಯ್ಯರ ಹೆಸರು ಭಾರಿ ಸದ್ದು ಮಾಡುತ್ತಿದೆ.
ಅಂದಹಾಗೆ ಜನತಾ ಪರಿವಾರದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದು 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಸಿದ್ದರಾಮಯ್ಯ, ನಂತರ ಕಾಂಗ್ರೆಸ್ ನ ಶಕ್ತಿಯಾಗಿ ಬೆಳೆದರು. ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ ಎನ್ನುವಷ್ಟರ ಮಟ್ಟಿಗೆ ಪಕ್ಷದಲ್ಲಿ ಅವರ ತೊಡಗಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿಷಯದಲ್ಲಿ ಅತ್ಯಂತ ಕರಾರುವಕ್ಕಾಗಿ ಹಾಗೂ ನಿಷ್ಟುರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಪದೇ ಪದೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಯೋಜನಾಬದ್ಧ ಮತ್ತು ಪ್ರತಿಬದ್ದ ತಾತ್ವಿಕ ಸಂಘರ್ಷದಲ್ಲಿ ಬಿಜೆಪಿ ವಿರುದ್ಧ ಕರಾರುವಕ್ಕಾದ ಎದುರಾಳಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಜನಜನಿತವಾಗಿದೆ. ಹೀಗಾಗಿ ಬಿಜೆಪಿಯ ರಾಜಕೀಯ ಮರುಳಾಟಕ್ಕೆ ಸಿದ್ದರಾಮಯ್ಯ ಸೂಕ್ತ ಪ್ರತ್ಯುತ್ತರ ಕೊಡಬಲ್ಲರು ಎಂಬ ನಿರೀಕ್ಷೆಯಲ್ಲಿ ಎಐಸಿಸಿ ಅಧ್ಯಕ್ಷಗಾದಿಗೆ ಇವರ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಇನ್ನುಳಿದಂತೆ ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ದಿಗ್ವಿಜಯ್ ಸಿಂಗ್, ಪ್ರಿಯಾಂಕವಾದ್ರಾ, ಮಧುಸೂದನ್ ಮಿಸ್ತ್ರಿ ಸೇರಿದಂತೆ ಅನೇಕರ ಹೆಸರುಗಳು ಎಐಸಿಸಿ ಅಧ್ಯಕ್ಷಗಾದಿಗೆ ಕೇಳಿ ಬಂದಿದೆ.








