ಬೆಂಗಳೂರು: ಡ್ರಗ್ ಪೆಡ್ಲರ್ ಹಾಗೂ ಕ್ಯಾಸಿನೋ ಒಡೆಯ ಶೇಖ್ ಪಾಸಿಲ್ ಕೊಲೊಂಬೋ ಪಾರ್ಟಿಗೆ ಗುಳಿಕೆನ್ನೆ ಬೆಡಗಿ ಐಂದ್ರಿತಾ ಹೋಗಿದ್ದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ವೈರಲ್ ಆದ ಫೋಟೋ ಹಾಗೂ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನಟಿ ಐಂದ್ರಿತಾ ರೇ ಉಲ್ಟಾ ಹೊಡೆದಿದ್ದಾರೆ.
ನಾನು ಹೋಗಿದ್ದು ಸಿನಿಮಾ ಪ್ರಮೋಶನ್ಗೆ, ಆದ್ರೆ, ಶೇಖ್ ಫಾಸಿಲ್ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ಚಿತ್ರದ ಪ್ರಚಾರಕ್ಕಾಗಿ ಕ್ಯಾಸಿನೋಗೆ ಹೋಗಬೇಕು ಎಂದು ನಮ್ಮ ಮ್ಯಾನೇಜರ್ ಹೇಳಿದ್ದರು. ಸೋಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್ ಜೊತೆ ನಾನು ಹೋಗಿದ್ದೇನೆ. ಶೇಖ್ ಫಾಸಿಲ್ ನನಗೆ ವೈಯಕ್ತಿಕ ಪರಿಚಯವಿಲ್ಲ ಎಂದು ಐಂದ್ರಿತಾ ರೇ ಹೇಳಿಕೊಂಡಿದ್ದಾರೆ.
ಅರ್ಬಾಜ್ ಖಾನ್ ಜೊತೆ `ಮೇ ಜರೂರ್ ಆವುಂಗಾ’ ಸಿನಿಮಾ ಮಾಡುತ್ತಿರುವಾಗ ನಾನು ಕ್ಯಾಸಿನೋಗೆ ಹೋಗಿದ್ದೆ. ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನು ಕ್ಯಾಸಿನೋಗೆ ಕಳಿಸಿದ್ದರು. ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರಿಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ನನ್ನ ಜೊತೆ ಬಂದಿದ್ದರು.
ಅರ್ಬಾಜ್ ಖಾನ್ ಹುಟ್ಟುಹಬ್ಬ ಪ್ರಯುಕ್ತ ಬೆಂಗಳೂರಿನಲ್ಲಿ ಪಾರ್ಟಿ ನಡೆದಾಗ ಶೇಖ್ ಫಾಸಿಲ್ ಬಂದಿದ್ದ. ಆದ್ರೆ ಆತನನ್ನು ನಾನು ಭೇಟಿಯಾಗಲಿಲ್ಲ. ಎರಡು ಬಾರಿಯೂ ನಾನು ಅರ್ಬಾಜ್ ಖಾನ್ ಜೊತೆಗೆ ಫಾಸಿಲ್ ಭೇಟಿಯಾಗಿದ್ದೆ. ಆಗ ನಾನು ಸೇರಿದಂತೆ ಯಾರಿಗೂ ಫಾಸಿಲ್ ಬಗ್ಗೆ ಗೊತ್ತಿರಲಿಲ್ಲ ಎಂದು ಗುಳಿಕೆನ್ನೆ ಬೆಡಗಿ ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾದ ಕೊಲೊಂಬೋದಲ್ಲಿರುವ ಶೇಖ್ ಫಾಸಿಲ್ನ ಕೊಲೆಸ್ಟ್ ಕ್ಯಾಸಿನೋ ಪಾರ್ಟಿಗಳಲ್ಲಿ ಸ್ಯಾಂಡಲ್ವುಡ್, ಬಾಲಿವುಡ್ ನಟ-ನಟಿಯರು ಭಾಗಿಯಾಗುತ್ತಿದ್ದರು. ಹೀಗಾಗಿ ಫಾಸಿಲ್ ನೀಡಿದ ಆಹ್ವಾನದ ಮೇರೆಗೆ ಕ್ಯಾಸಿನೋಗೆ ಬರುತ್ತಿದ್ದೇನೆ. ನನ್ನನ್ನು ಆಹ್ವಾನಿಸಿದ್ದಕ್ಕೆ ಶೇಖ್ ಪಾಸಿಲ್ಗೆ ಅವರಿಗೆ ಧನ್ಯವಾದ ಎಂದು ವಿಡಿಯೋದಲ್ಲಿ ಹೇಳಿದ್ದ ಐಂದ್ರಿತಾ ರೇ, ಈಗ ಆತ ಯಾರು ಅಂತಾನೆ ಗೊತ್ತಿಲ್ಲ ಎಂದಿರುವುದು ಕುತೂಹಲ ಮೂಡಿಸಿದೆ.