ರಾಜ್ಯ ರಾಜಧಾನಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ‘ಬೆಂಗಳೂರು ಕಂಬಳ’ಕ್ಕೆ (Kambala) ನಟಿಯರಾದ ಐಶ್ವರ್ಯಾ ರೈ ಹಾಗೂ ಅನುಷ್ಕಾ ಶೆಟ್ಟಿ ಆಗಮಿಸಲಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷದಷ್ಟು ಜನರು ಸೇರುವ ನಿರೀಕ್ಷೆ ಇದ್ದು, ಈಗಾಗಲೇ ಎಲ್ಲ ರೀತಿಯ ತಯಾರಿ ನಡೆದಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದು ಕೂಡ ಹೇಳಿದ್ದಾರೆ. ನವೆಂಬರ್ 25, 26ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ತಯಾರಿ ಸಲುವಾಗಿ ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ-ಭಾಷಾ ಸಂಘಟನೆಗಳ ಜೊತೆ ನಡೆದ ಸಮಾಲೋಚನಾ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.
ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ಈ ಕಂಬಳ ನಡೆಯಲಿದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಸಾಂಗ್ ಬಿಡುಗಡೆ ಮಾಡಲಾಯಿತು.








