ಅಜಾತಶತ್ರು ಸಿ.ಎಂ.ಉದಾಸಿ ರಾಜಕೀಯ ಜರ್ನಿ
ಪುರಸಭೆ ಅಧ್ಯಕ್ಷ ಸ್ಥಾನದಿಂದ ಸಚಿವಪಟ್ಟದವರೆಗೆ.. ಬೆಳೆದು ರಾಜ್ಯ ರಾಜಕಾರಣದಲ್ಲಿ ತಮ್ಮದೇಯಾದ ಚಾಪು ಮೂಡಿದ್ದ ಹಾನಗಲ್ ಕ್ಷೇತ್ರದ ದೊರೆಯಂತೆ ಮೆರೆದ ಸರಳ ಸಜ್ಜನ ರಾಜಕಾರಣಿ ಮಾಜಿ ಸಚಿವ, ಶಾಸಕ ಸಿ ಎಂ ಉದಾಸಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಜನತಾ ಪರಿವಾರ ಹಿನ್ನೆಲೆಯಿಂದ ಬಂದ ಸಿ.ಎಂ ಉದಾಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಬರೋಬ್ಬರಿ ಆರು ಬಾರಿ ಶಾಸಕರಾಗಿ ಅವರು ಆಯ್ಕೆಯಾಗಿದ್ದರು.
1937 ಫೆಬ್ರವರಿ 2 ರಂದು ಸಾವಿತ್ರಮ್ಮ ಮತ್ತು ಮಹಾಲಿಂಗಪ್ಪ ದಂಪತಿಗೆ ಜನಿಸಿದ ಉದಾಸಿ, ಅವರ ಪೂರ್ಣ ಹೆಸರು ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ. ಕೇವಲ 8ನೇ ತರಗತಿ ವಿದ್ಯಾಭ್ಯಾಸ ಮುಗಿಸಿ ಅಂಗಡಿಯಲ್ಲಿ ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಯುವಕ ಮುಂದೆ ರಾಜಕೀಯಕ್ಕೆ ಧುಮುಕಿ ಚರಿತ್ರೆ ಸೃಷ್ಠಿಸಿದ್ದು, ಈಗ ಇತಿಹಾಸ.
1974ರಲ್ಲಿ ನಗರ ಸುಧಾರಣಾ ಸಮಿತಿ ಮೂಲಕ ಹಾನಗಲ್ ಪುರಸಭೆಗೆ ಸ್ಪರ್ಧೆ ಮಾಡಿದ್ದ ಉದಾಸಿ, ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು.
ನಂತರ ಜನತಾ ಪರಿವಾರದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. 1983ರಲ್ಲಿ ಪಕ್ಷೇತರವಾಗಿ, 1985ರಲ್ಲಿ ಜನತಾ ಪಕ್ಷದಿಂದ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಅವರು, ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಬಳಿಕ 1990ರಲ್ಲಿ ಧಾರವಾಡ ಜಿಲ್ಲೆ ಜನತಾದಳ ಅಧ್ಯಕ್ಷರಾದ ಸಿ ಎಂ ಉದಾಸಿ, 1994ರಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ರು. ಹಾಗೆ ಜೆ.ಹೆಚ್ ಪಟೇಲ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾದ್ರು. ನಂತರ 2004ರಲ್ಲಿ ಪಕ್ಷ ಬದಲಿಸಿ ಬಿಜೆಪಿ ಸೇರ್ಪಡೆಯಾದ ಉದಾಸಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಬಿಜೆಪಿಗೆ ಸೇರಿದ ಬಳಿಕ ಹಾವೇರಿ ಜಿಲ್ಲೆಯನ್ನು ಕೇಸರಿ ಪಡೆಯ ಭದ್ರಕೋಟೆಯನ್ನಾಗಿ ಮಾಡಿದ ಕೀರ್ತಿ ಸಿ ಎಂ ಉದಾಸಿ ಅವರಿಗೆ ಸಲ್ಲುತ್ತದೆ.
ಉದಾಸಿ ಅವರ ಐದು ದಶಕದ ರಾಜಕೀಯ ಜೀವನದಲ್ಲಿ ಜನತಾ ಪಕ್ಷ, ಜನತಾ ದಳ, ಬಿಜೆಪಿ, ಕೆಜೆಪಿ ಸುತ್ತಿ ಮತ್ತೆ ಬಿಜೆಪಿಗೆ ಮರಳಿದ್ದರು.
ಮೊದಲು ಜನತಾ ಪರಿವಾರದಲ್ಲಿದ್ದ ಉದಾಸಿ ಬಳಿಕ ಬಿಜೆಪಿ ಸೇರ್ಪಡೆಗೊಂಡರು. ಬಳಿಕ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಅವರ ಹಿಂದೆಯೇ ಕೆಜೆಪಿಗೆ ಸೇರ್ಪಡೆಯಾಗಿದರು. ಆದರೆ, ಕೆಜೆಪಿ ಅಭ್ಯರ್ಥಿಯಾಗಿ 2013ರಲ್ಲಿ ಸೋಲಿನ ರುಚಿ ಕಂಡ ಉದಾಸಿ, ಮತ್ತೆ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ವಾಪಸಾದರು.
ಈ ಬಾರಿ ಅನಾರೋಗ್ಯದಿಂದ ಸಂಪುಟದಿಂದ ದೂರ ಉಳಿದಿದ್ದ ಅವರು, ಮಂಗಳವಾರ ಇಹಲೋಕ ತ್ಯೆಜಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಅಂತಲೇ ಗುರುಸಿಕೊಂಡಿದ್ದ ಉದಾಸಿ ಅವರ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.










