ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಅಜಯ್ ರಾವ್ – ಚಿತ್ರಕ್ಕೆ “ಯುದ್ಧಕಾಂಡ” ಟೈಟಲ್….
ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದೆ. ಸಖತ್ ಇಂಟ್ರಸ್ಟಿಂಗ್ ಆಗಿರೋ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.
‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ಹಂಚಿಕೊಂಡ್ರು.
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಚಿತ್ರರಂಗದ ಜರ್ನಿಯನ್ನು ಮೆಲುಕು ಹಾಕಿದ್ರು ಅಜಯ್ ರಾವ್.
‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ‘ಯುದ್ಧಕಾಂಡ’ ಚಿತ್ರತಂಡ.
Ajay Rao : For the first time Ajay Rao in the role of a lawyer – the film titled “Yuddhkanda”….