ಮಗುವಿನ ನಿರೀಕ್ಷೆಯಲ್ಲಿದ್ದ ಕೋ-ಪೈಲಟ್ ಅಖಿಲೇಶ್
ಮಥುರಾ, ಅಗಸ್ಟ್ 8: ಕೇರಳದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಕೋ-ಪೈಲಟ್ ಅಖಿಲೇಶ್ ಕುಮಾರ್ ಅವರ ಪತ್ನಿ ಗರ್ಭಿಣಿಯಾಗಿದ್ದು, ಅವರು ಮುಂದಿನ 15-17 ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ ಸಂಜೆ 7.41 ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಯಿತು.
ಅಪಘಾತದಲ್ಲಿ 18 ಜನರು ಮೃತಪಟ್ಟಿದ್ದರೆ, 127 ಜನರು ಆಸ್ಪತ್ರೆಗಳಲ್ಲಿದ್ದಾರೆ, ಇತರರನ್ನು ಬಿಡುಗಡೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದ್ದಾರೆ.

ಏತನ್ಮಧ್ಯೆ, ದುರಂತ ಘಟನೆಯಲ್ಲಿ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ದೀಪಕ್ ಸಾಥೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ನಿನ್ನೆ ವಿಮಾನ ಅಪಘಾತಕ್ಕೀಡಾದ ಬಗ್ಗೆ ಪ್ರಾಧಿಕಾರದಿಂದ ಕರೆ ಬಂದಿದೆ ಎಂದು ಅಖಿಲೇಶ್ ಕುಮಾರ್ ತಂದೆ ತುಳಸಿ ರಾಮ್ ತಿಳಿಸಿದ್ದು, ಅಖಿಲೇಶ್ ಸ್ಥಿತಿ ಗಂಭೀರವಾಗಿದೆ ಎಂದು ನಮಗೆ ಪ್ರಾರಂಭದಲ್ಲಿ ತಿಳಿಸಲಾಗಿತ್ತು. ಬಳಿಕ, ಅವರ ನಿಧನದ ವಿಷಯ ತಿಳಿಸಲಾಯಿತು ಎಂದು ಹೇಳಿದರು. ಅಖಿಲೇಶ್ ಅವರ ಕಿರಿಯ ಸಹೋದರ ಮತ್ತು ಸೋದರ ಮಾವ ಕೇರಳಕ್ಕೆ ಹೋಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕ್ಯಾಪ್ಟನ್ ಕುಮಾರ್ ಅವರ ಸೋದರ ಸಂಬಂಧಿ ಬಸುದೇವ್, ಅಖಿಲೇಶ್ ಪತ್ನಿ ಮುಂದಿನ 15-17 ದಿನಗಳಲ್ಲಿ ಮಗುವಿಗೆ ಜನ್ಮ ನೀಡುವವರಿದ್ದಾರೆ ಎಂದು ಹೇಳಿದರು. ಡಿಸೆಂಬರ್ 2017 ರಲ್ಲಿ ವಿವಾಹವಾಗಿದ್ದ ಅಖಿಲೇಶ್ 2017 ರಲ್ಲಿ ಏರ್ ಇಂಡಿಯಾ ಪೈಲಟ್ ಆಗಿ ಸೇರಿಕೊಂಡರು ಮತ್ತು ಲಾಕ್ ಡೌನ್ ನ ಮೊದಲು ಕೊನೆಯದಾಗಿ ಮನೆಗೆ ಬಂದಿದ್ದರು ಎಂದು ಅವರು ಹೇಳಿದರು. ಅಖಿಲೇಶ್ ತುಂಬಾ ವಿನಮ್ರ, ಸಭ್ಯ ಮತ್ತು ಉತ್ತಮ ವ್ಯಕ್ತಿ ಎಂದು ಬಸುದೇವ್ ಹೇಳಿದರು.








