ಅಖಿಲೇಶ್ ಕುಮಾರ್ ಅವರ ಮೃತದೇಹ ಹುಟ್ಟೂರಿಗೆ
ಮಥುರಾ, ಅಗಸ್ಟ್ 9: ಶುಕ್ರವಾರ ರಾತ್ರಿ ಸಂಭವಿಸಿದ ದುಬೈ-ಕೋಝಿಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಭೀಕರ ದುರಂತಕ್ಕೆ ರಾಷ್ಟ್ರವು ಶೋಕಿಸುತ್ತಿದ್ದಂತೆ, ಇಬ್ಬರು ಪೈಲಟ್‌ಗಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ಸಹ ಪೈಲಟ್ ಅಖಿಲೇಶ್ ಕುಮಾರ್ ಅವರ ಮೃತದೇಹವನ್ನು ಇಂದು ಅವರ ಹುಟ್ಟೂರು ಮಥುರಾ ಗೆ ಕೊಂಡೊಯ್ಯಲಾಗುತ್ತಿದೆ. ಭಾನುವಾರ ಬೆಳಿಗ್ಗೆ 2.05 ರ ಸುಮಾರಿಗೆ ಅವರ ಮೃತದೇಹ ದೆಹಲಿಯನ್ನು ತಲುಪಿದ್ದು, ದೆಹಲಿಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿಗಳು ಯುವ ಪೈಲಟ್‌ಗೆ ಗೌರವ ಸಲ್ಲಿಸಿದರು.

ಸುಮಾರು 200 ಏರ್ ಇಂಡಿಯಾ ಸದಸ್ಯರು ಕುಮಾರ್ ಅವರಿಗೆ ಎರಡು ನಿಮಿಷಗಳ ಮೌನ ಪ್ರಾರ್ಥನೆ ನಡೆಸಿ ಗೌರವ ಸಲ್ಲಿಸಿದರು. ಅಖಿಲೇಶ್ ಅವರ ಸೋದರ ಮಾವ ಅವರೊಂದಿಗೆ ರಕ್ಷಾ ಬಂಧನ್ ದಿನ ವೀಡಿಯೊ ಕರೆಯಲ್ಲಿ ಸಂಭಾಷಣೆ ನಡೆಸಿದ್ದು, ರಾಖಿ ತಲುಪಿಲ್ಲ ಎಂದು ಹೇಳಿದ್ದರು. ಅದುವೇ ನಮ್ಮ ಕೊನೆಯ ಸಂಭಾಷಣೆಯಾಗಿತ್ತು.
ಆಗಸ್ಟ್ 15, 16 ರಂದು ಅಖಿಲೇಶ್ ಮನೆಗೆ ಬರಲು ನಿರ್ಧರಿಸಿದ್ದರು. ಆದರೆ ದೇವರ ಇಚ್ಛೆ ಬೇರೆ ಆಗಿತ್ತು ಎಂದು ಅವರು ತಿಳಿಸಿದರು. 2017ರಲ್ಲಿ ವಿವಾಹವಾಗಿದ್ದ ಅಖಿಲೇಶ್, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಮುಂದಿನ 15-20 ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.








