ಮುಂಬೈ, ಮೇ 27 : ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿರ್ದೇಶಕ ಬಾಲ್ಕಿ ಮತ್ತು ತಂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪೋಟೋಗಳು ವೈರಲ್ ಆಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ಮನೆಯಲ್ಲಿದ್ದ ನಟ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಇನ್ನೂ ಸಿಕ್ಕಿಲ್ಲದಿದ್ದರೂ ಅಕ್ಷಯ್ ಕುಮಾರ್ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಮುಂಬೈ ನ ಶೂಟಿಂಗ್ ಸೆಟ್ ನಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಸಂಪೂರ್ಣ ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಕೆಲವೇ ಕೆಲವು ಕ್ರ್ಯೂಗಳೊಂದಿಗೆ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.
ಅಂದ ಹಾಗೇ ಅಕ್ಷಯ್ ಕುಮಾರ್ ಬಿಝಿಯಾಗಿರುವುದು ಜಾಹೀರಾತಿನ ಚಿತ್ರೀಕರಣದಲ್ಲಿ. ನಟ ಅಕ್ಷಯ್ ಕುಮಾರ್, ನಿರ್ದೇಶಕ ಬಾಲ್ಕಿ ಮತ್ತು ತಂಡ ಸರ್ಕಾರ ಪ್ರಾಯೋಜಿತದ ಕೊರೋನಾ ವೈರಸ್ ಬಗೆಗಿನ ಜಾಗೃತಿ ಜಾಹೀರಾತುವಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ದೇಶದಲ್ಲಿ ಲಾಕ್ ಡೌನ್ 4 ಜಾರಿಯಲ್ಲಿದ್ದು, ಬಹಳಷ್ಟು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಕೆಲವೇ ದಿನಗಳಲ್ಲಿ ಲಾಕ್ ಡೌನ್ 4 ರ ಅವಧಿಯೂ ಮುಗಿಯಲಿದ್ದು, ಬಳಿಕ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಾಗೃತಿ ಮೂಡಿಸುವ ಜಾಹೀರಾತುವಿನ ಚಿತ್ರೀಕರಣದಲ್ಲಿ ನಟ ಅಕ್ಷಯ್ ಕುಮಾರ್ ಭಾಗಿಯಾಗಿದ್ದಾರೆ.
ಲಾಕ್ ಡೌನ್ 4 ರ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆ ಕಂಡಿರುವ ಕಾರಣ, ಲಾಕ್ ಡೌನ್ ಅವಧಿ ಕೊನೆಗೊಂಡ ಬಳಿಕ ಏನೆಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಬೇಕು, ಯಾವ ರೀತಿ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಜವಾಬ್ದಾರಿಗಳ ಬಗ್ಗೆ ತಿಳಿಸುವ ಆರೋಗ್ಯ ಸಚಿವಾಲಯದ ಜಾಹಿರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಸೋಂಕು ಹರಡದಂತೆ ಸಾಮಾಜಿಕ ಅಂತರ, ಸ್ವಚ್ಚತೆ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಚಿತ್ರೀಕರಣ ನಡೆಸುತ್ತಿರುವುದಾಗಿ ನಿರ್ದೇಶಕ ಬಾಲ್ಕಿ ತಿಳಿಸಿದ್ದಾರೆ








