ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ|
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ|
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ|
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ||
ಇದರ ಅರ್ಥ ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಆದುದರಿಂದ ಋಷಿಗಳು ಇದನ್ನು ‘ಅಕ್ಷಯ ತೃತೀಯಾ’ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯವಾಗುತ್ತದೆ.
ಅಕ್ಷಯ ತೃತೀಯ ಅತ್ಯಂತ ಶುಭದಾಯಕ ಹಾಗೂ ಪವಿತ್ರವಾದ ದಿನ. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸುತ್ತಾರೆ. ಈ ದಿನ ಎಲ್ಲಾ ಸಮಯವು ಶುಭ ಸಮಯವಾಗಿದ್ದು, ಯಾವುದೇ ಪಂಚಾಂಗ ನೋಡಬೇಕಿಲ್ಲ.
ಸಂಸ್ಕೃತದಲ್ಲಿ ಅ ಎಂದರೆ ಇಲ್ಲ ಮತ್ತು ಕ್ಷಯ ಎಂದರೆ ವ್ಯಯ ಅಥವಾ ಮುಗಿಯುವ, ಅಕ್ಷಯ ಎಂದರೆ ಸದಾ ವೃದ್ಧಿಸುವ, ಎಂದೂ ಮುಗಿಯದ ಎಂದರ್ಥ. ಹಾಗಾಗಿ ಅಕ್ಷಯ ತೃತೀಯ ಎಂದರೆ ಈ ದಿನ ಕೈಗೊಂಡ ಯಾವುದೇ ಕೆಲಸಗಳಲ್ಲಿ ಎಂದಿಗೂ ಕೆಡುಕು ಆಗದು, ಅದು ದಿನೇ ದಿನೇ ಬೆಳೆದು ಅಭಿವೃದ್ಧಿಯಾಗುತ್ತದೆ ಎನ್ನುವ ನಂಬಿಕೆ. ಆದುದರಿಂದ ಅಕ್ಷಯ ತೃತೀಯ ಎನ್ನುವುದು ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತ.
ಪುರಾಣದ ಅನೇಕ ಕತೆಗಳು ಕೂಡ ಅಕ್ಷಯ ತೃತೀಯಕ್ಕೆ ತಳಕು ಹಾಕಿಕೊಂಡಿದೆ. ದ್ವಾಪರ ಯುಗದಲ್ಲಿ ಕೃಷ್ಣನನ್ನು ನೋಡಲು ಆತನ ಗೆಳೆಯ ಸುಧಾಮ ಬರಿಗೈಯಲ್ಲಿ ಹೋಗಲು ಮನಸ್ಸು ಬಾರದೆ, ಅವಲಕ್ಕಿಯನ್ನು ಕಟ್ಟಿಕೊಂಡು ಬರುತ್ತಾನೆ. ಆಗ ಶ್ರೀ ಕೃಷ್ಣ ಅವಲಕ್ಕಿಯ ಬದಲಿಗೆ ಸುಧಾಮನಿಗೆ ಸಂಪತ್ತನ್ನು ಕರುಣಿಸಿದ ದಿನವೇ ಅಕ್ಷಯ ತೃತೀಯ ಎಂದು ಪುರಾಣ ಹೇಳುತ್ತದೆ. ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿರುವಾಗ ದುರ್ವಾಸ ಮುನಿಗಳು ಅವರ ಶಿಷ್ಯರೊಂದಿಗೆ, ದುರ್ಯೋಧನನ ಬೇಡಿಕೆಯಂತೆ ದ್ರೌಪದಿಯ ಭೋಜನದ ಸಮಯದ ಬಳಿಕ ಭೇಟಿಯಾಗುತ್ತಾರೆ. ಆಗ ದ್ರೌಪದಿ ಅಪದ್ಬಾಂದವ ಶ್ರೀ ಕೃಷ್ಣನನ್ನು ಪ್ರಾರ್ಥಿಸಲು ಆತ ಪಾತ್ರೆಯಲ್ಲಿ ಉಳಿದಿದ್ದ ಒಂದು ಅಗುಲು ಅನ್ನವನ್ನು ಅಕ್ಷಯವನ್ನಾಗಿ ಮಾಡಿದ ದಿನವೇ ಅಕ್ಷಯ ತೃತೀಯ ಎಂದು ಕೂಡ ಪುರಾಣ ಹೇಳುತ್ತದೆ.
ಇಷ್ಟೇ ಅಲ್ಲ ಅಕ್ಷಯ ತೃತೀಯವೆಂದರೆ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಗಣಪತಿಗೆ ಹೇಳಲು ಪ್ರಾರಂಭಿಸಿದ ದಿನವೆಂದೂ, ವಿಷ್ಣು ಪರಶುರಾಮ ಅವತಾರವೆತ್ತಿದ ದಿನವೆಂದೂ, ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದ ದಿನವೆಂದೂ, ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ನಡೆಸಿದಾಗ ಶ್ರೀ ಮಹಾಲಕ್ಷ್ಮಿಯು ಜನಿಸಿದ ದಿನವೆಂದೂ ಪುರಾಣದ ಕಥೆಗಳು ಹೇಳುತ್ತದೆ.
ಆದರೆ ಈ ಬಾರಿ ನಾವು ಅಕ್ಷಯ ತೃತೀಯದಂದು ಲಾಕ್ ಡೌನ್ ಜಾರಿಯಲ್ಲಿ ಇರುವುದರ ಜೊತೆಗೆ ಕೊರೊನಾದ ಭೀತಿಯಲ್ಲಿ ಇದ್ದೇವೆ. ಆದ್ದರಿಂದ ಅಕ್ಷಯ ತೃತೀಯದಂದು ಏನಾದರು ಖರೀದಿಸುವ ಸಂಕಲ್ಪವಿದ್ದರೆ, ಆ ಧನವನ್ನು ದೇವರ ಮುಂದೆ ಇಟ್ಟು, ಪರಿಸ್ಥಿತಿ ತಿಳಿಗೊಂಡ ಬಳಿಕ ಖರೀದಿಸೋಣ.
ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳವಾಡದೇ, ಒಳ್ಳೆಯ ಮಾತುಗಳನ್ನು ಅಕ್ಷಯವನ್ನಾಗಿಸುತ್ತಾ ವಿಶಿಷ್ಟ ರೀತಿಯಲ್ಲಿ ಈ ಬಾರಿ ಅಕ್ಷಯ ತೃತೀಯ ಆಚರಿಸೋಣ.








