ಕೆರೆಬಿಯನ್ ಪ್ರೀಮಿಯರ್ ಕ್ರಿಕೆಟ್ ಟೂರ್ನಿಗಿಲ್ಲ ಕೋವಿಡ್ ಸಂಕಷ್ಟ..!
ಆಗಸ್ಟ್ 18ರಿಂದ ಸೆಪ್ಟಂಬರ್ 10 ರವರೆಗೆ ಕೆರೆಬಿಯನ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಸ್ಪರ್ಧಿಸಲಿವೆ. ಈ ಬಾರಿಯ ಸಿಪಿಎಲ್ ಟೂರ್ನಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಕೊರೊನಾ ಸೋಂಕಿನಿಂದಾಗಿ ಕಟ್ಟು ನಿಟ್ಟಿನ ಶಿಷ್ಟಚಾರಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ.
ಟೂರ್ನಿಗೆ ಮುನ್ನ ಎಲ್ಲಾ ತಂಡಗಳ ಆಟಗಾರರು ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಅದೆ ರೀತಿ ಕೋವಿಡ್-19 ಟೆಸ್ಟ್‍ಗೂ ಒಳಪಡಿಸಲಾಗುತ್ತಿದೆ. ಈಗಾಗಲೇ ಸಿಪಿಎಲ್ ನಲ್ಲಿ ಭಾಗವಹಿಸಲು ಎಲ್ಲಾ ಆಟಗಾರರು, ಸಿಬ್ಬಂದಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು, ಸಿಬ್ಬಂದಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 162 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ.
14 ದಿನಗಳ ಕಾಲ ಹೊಟೇಲ್ ಕ್ವಾರಂಟೈನ್ ನಲ್ಲಿದ್ದು, ಪ್ರತಿ ದಿನ ಟೆಸ್ಟ್‍ಗೆ ಒಳಪಡಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಸಿಪಿಎಲ್ ನಲ್ಲಿ ಭಾಗಿಯಾಗುವವರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಅಂದ ಹಾಗೇ ಟೂರ್ನಿಯಲ್ಲಿ ಮೊದಲ ಬಾರಿ ಭಾರತೀಯ ಆಟಗಾರ ಭಾಗಿಯಾಗುತ್ತಿದ್ದಾರೆ. ಮುಂಬೈನ 48ರ ಹರೆಯದ ಸ್ಪಿನ್ನರ್ ಪ್ರವೀಣ್ ತಂಬೆ ಅವರು ಇತ್ತೀಚೆಗೆ ದೇಸಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಪ್ರವೀಣ್ ತಂಬೆ ಟ್ರಿನ್ ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡಲಿದ್ದಾರೆ.
ಒಟ್ಟು 33 ಪಂದ್ಯಗಳು ನಡೆಯಲಿದ್ದು, ಎರಡು ಮೈದಾನದಲ್ಲೇ ಪಂದ್ಯಗಳು ನಡೆಯಲಿವೆ. ಟ್ರಿನಿಡಾಡ್ ಮತ್ತು ಟೊಬಾಗೊ ಅಂಗಣದಲ್ಲಿ ಜೈವಿಕ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಸಂಘಟಿಸಲಾಗಿದೆ. ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಆಡುತ್ತಿಲ್ಲ. ಇಮ್ರಾನ್ ತಾಹೀರ್ ಮಾತ್ರ ಸಿಪಿಎಲ್ ನಲ್ಲಿ ಆಡುತ್ತಿದ್ದಾರೆ.
ಸಿಪಿಎಲ್ ಟೂರ್ನಿಯಲ್ಲಿ ಭಾಗಿಯಾಗುವ ತಂಡಗಳು
ಜಮೈಕಾ ತಲ್ಲಾವಾಸ್, ಸೇಂಟ್ ಲೂಸಿಯಾ ಝೊಕ್ಸ್ , ಗಯಾನ ಅಮೇಜಾನ್ ವಾರಿಯರ್ಸ್, ಬಾರ್ಬೊಡಸ್ ಟ್ರಿಡೆಂಟ್ಸ್, ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪ್ಯಾಟಿಯೊಟ್ಸ್, ಟ್ರಿನ್‍ಬಾಗೋ ನೈಟ್ ರೈಡರ್ಸ್ ತಂಡಗಳು ಪ್ರತಿಷ್ಠಿತ ಟ್ರೋಫಿಗೆ ಕಾದಾಟ ನಡೆಸಲಿವೆ.