All India Football Federation | ಭಾರತೀಯ ಫುಟ್ ಬಾಲ್ ರಂಗಕ್ಕೆ ಹೊಸ ಸ್ವರೂಪ
ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನ ಅಧ್ಯಕ್ಷರಾಗಿ ಮಾಜಿ ಫುಟ್ ಬಾಲ್ ಆಟಗಾರ ಕಲ್ಯಾಣ್ ಚೌಬೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕರ್ನಾಟಕ ರಾಜ್ಯ ಫುಟ್ ಬಾಲ್ ಸಂಸ್ಥೆಯ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರು ಆಯ್ಕೆಯಾಗಿದ್ದಾರೆ.
ದೆಹಲಿಯ ಫುಟ್ ಬಾಲ್ ಹೌಸ್ ನಲ್ಲಿ ನಡೆದ ಚುನಾವಣೆಯಲ್ಲಿ ಕಲ್ಯಾಣ್ ಚೌಬೆ ಅವರು, ಭಾರತ ಫುಟ್ ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಅವರನ್ನು 33-1 ಮತಗಳಿಂದ ಪರಾಭವಗೊಳಿಸಿದ್ರು. ಕಲ್ಯಾಣ್ ಚೌಬೆ ಅವರು ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಾಗನ್ ತಂಡದ ಮಾಜಿ ಗೋಲು ಕೀಪರ್ ಆಗಿದ್ದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್.ಎ. ಹ್ಯಾರಿಸ್ ಅವರು 29-5ರಿಂದ ರಾಜಸ್ತಾನ ಫುಟ್ ಬಾಲ್ ಸಂಸ್ಥೆಯ ಅಧ್ಯಕ್ಷರಾದ ಮನ್ವೇಂದ್ರ ಸಿಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ರು. ಹಾಗೇ ಅರುಣಾಚಲ ಪ್ರದೇಶ ಪ್ರದೇಶದ ಅಜಯ್ ಕಿಪಾ ಅವರು 32-1ರಿಂದ ಆಂದ್ರ ಪ್ರದೇಶದ ಕೊಸರಾಜು ಗೋಪಾಲಕೃಷ್ಣ ವಿರುದ್ಧ ಜಯ ಸಾಧಿಸಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಸಾಕಷ್ಟು ಸವಾಲುಗಳಿವೆ. ಸಾಕಷ್ಟು ಸವಾಲುಗಳು ಇವೆ. ಫುಟ್ ಬಾಲ್ ಫೆಡರೇಷನ್ ನಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಹೋಗುವಂತಹ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲಾ ರಾಜ್ಯಗಳಲ್ಲೂ ಫುಟ್ ಬಾಲ್ ಆಟಕ್ಕೆ ಉತ್ತೇಜನ ನೀಡಿ ಭಾರತೀಯ ಫುಟ್ ಬಾಲ್ ರಂಗಕ್ಕೆ ಹೊಸ ಸ್ವರೂಪವನ್ನು ನೀಡುವಂತಹ ಪ್ರಯತ್ನವನ್ನು ಮಾಡುತ್ತೇವೆ ಎಂದು ನೂತನವಾಗಿ ಆಯ್ಕೆಯಾಗಿರುವ ಉಪಾಧ್ಯಕ್ಷರಾದ ಎನ್. ಎ. ಹ್ಯಾರಿಸ್ ಅವರು ಹೇಳಿದ್ದಾರೆ.
ಇದೇ ವೇಳೆ ತಮ್ಮ ಗೆಲುವಿಗೆ ಸಹಕರಿದಿದ್ದ ಎಲ್ಲರಿಗೂ ಧನ್ಯವಾದಗಳು. ಅದರಲ್ಲೂ ಕರ್ನಾಟಕ ರಾಜ್ಯ ಫುಟ್ ಬಾಲ್ ಸಂಸ್ಥೆಯ ಕಾರ್ಯದರ್ಶಿ ಎಮ್. ಸತ್ಯನಾರಾಯಣ ಹಾಗೂ ರಾಜ್ಯ ಫುಟ್ ಬಾಲ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಧನ್ಯವಾದಗಳು ಎಂದು ಹ್ಯಾರಿಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ಗೆ ಹೊಸ ಆಡಳಿತ ಮಂಡಳಿ ನೇಮಕಗೊಂಡಿದೆ. ಇನ್ನಾದ್ರೂ ಕಳೆದುಕೊಂಡಿರುವ ಘನತೆಯನ್ನು ಮತ್ತೆ ಪಡೆಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ. ಹಾಗೇ ಅಶೋಕ ನಗರದಲ್ಲಿರುವ ಫುಟ್ ಬಾಲ್ ಕ್ರೀಡಾಂಗಣಕ್ಕೆ ಹೊಸ ರೂಪ ಇನ್ನಾದ್ರೂ ಸಿಗಲಿ ಎಂಬುದೇ ರಾಜ್ಯ ಫುಟ್ ಬಾಲ್ ಅಭಿಮಾನಿಗಳ ಆಶಯವಾಗಿದೆ.