ರೈತನ ಮಗ ಶುಬ್ಬಿ ಗೆ ಆಲ್ ದಿ ಬೆಸ್ಟ್..!
ಶುಬ್ಮನ್ ಗಿಲ್… ವಯಸ್ಸು 21.. ಜೆರ್ಸಿ ನಂಬರ್ 77.. ಪಂಜಾಬ್ ನ ಉದಯೊನ್ಮುಖ ಕ್ರಿಕೆಟಿಗ. 19 ವಯೋಮಿತಿ ವಿಶ್ವಕಪ್ ಟೂರ್ನಿಯ ಸ್ಟಾರ್ ಆಟಗಾರ. ಕ್ರಿಕೆಟ್ ಬುದ್ಧ ರಾಹುಲ್ ದ್ರಾವಿಡ್ ಅವರ ನೀಲಿಗಣ್ಣಿನ ಹುಡುಗ. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಮತ್ತು ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರ ಮೆಚ್ಚುಗೆ ಗಳಿಸಿದ್ದ ತರುಣ. ಯುವರಾಜ್ ಸಿಂಗ್ ಅವರ ಪ್ರೀತಿಯ ಬ್ಯಾಟ್ಸ್ ಮೆನ್..
ಹೀಗೆ ತನ್ನ ಪ್ರತಿಭೆ ಮತ್ತು ಸಾಮರ್ಥ್ಯ ಹಾಗೂ ಜಬರ್‌ದಸ್ತ್ ಆಟದ ಮೂಲಕ ಮಿಂಚು ಹರಿಸಿದ್ದ ಶುಬ್ಮನ್ ಗಿಲ್ ಅವರಿಗೆ 2020ರ ಡಿಸೆಂಬರ್ 26 ಮರೆಯಲಾಗದ ದಿನ.
ಹೌದು, ಐತಿಹಾಸಿಕ ಮೆಲ್ಬರ್ನ್ ಮೈದಾನದಲ್ಲಿ ಶುಬ್ಮನ್ ಗಿಲ್ ಅವರು ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಗಿಲ್ ಅವರು ಟೆಸ್ಟ್ ಕ್ರಿಕೆಟ್‌ಗೆ ಮೊದಲ ಹೆಜ್ಜೆಯನ್ನಿಡುತ್ತಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಗೆ 297ನೇ ಆಟಗಾರನಾಗಿ ಶುಬ್ಮನ್ ಗಿಲ್ ಕಾಲಿಡುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚು ಹರಿಸುತ್ತಿರುವ ಶುಬ್ಮನ್ ಗಿಲ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು.
11ರ ಹರೆಯದಲ್ಲೇ ಗಿಲ್ ಅವರು ಪಂಜಾಬ್ ಜಿಲ್ಲಾ 16 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆಡಿರುವ ಐದು ಪಂದ್ಯಗಳಲ್ಲಿ 339 ರನ್ ದಾಖಲಿಸಿದ್ದರು.
2014ರಲ್ಲಿ ಪಂಜಾಬ್ ರಾಜ್ಯ ಮಟ್ಟದ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿ ಮಿಂಚು ಹರಿಸಿದ್ದರು. ಜಿಲ್ಲಾ ಮಟ್ಟದ ಪಂದ್ಯವೊಂದರಲ್ಲಿ 587 ರನ್ ಪೇರಿಸಿ ವಿಶ್ವ ದಾಖಲೆ ಕೂಡ ನಿರ್ಮಿಸಿದ್ದರು. 2013-14ನೆ ಸಾಲಿನ ಎಮ್.ಎ. ಚಿದಂಬರಮ್ ಟ್ರೋಫಿಯನ್ನು ಕೂಡ ತನ್ನದಾಗಿಸಿಕೊಂಡಿದ್ದರು.
19 ವಯೋಮಿತಿ ವಿಶ್ವ ಕ್ರಿಕೆಟ್ ಟೂರ್ನಿಯ ಉಪನಾಯಕನಾಗಿದ್ದ ಗಿಲ್ ಅವರು 418 ರನ್ ಪೇರಿಸುವ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಅಂತನೇ ಬಿಂಬಿತರಾಗಿದ್ದರು.
2017-18ರಲ್ಲಿ ರಣಜಿ ಟೂರ್ನಿಗೆ ಎಂಟ್ರಿಯಾದ ಶುಬ್ಮನ್ ಗಿಲ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅದೇ ರೀತಿ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ಆಯ್ಕೆಗಾರರ ಗಮನ ಕೂಡ ಸೆಳೆದಿದ್ದರು.
ಪಂಜಾಬ್‌ನ ರೈತನ ಮಗನಾಗಿರುವ ಗಿಲ್ ಅವರನ್ನು ಪ್ರೀತಿಯಿಂದ ಸುಬ್ಬು, ಸುಬ್ಬಿ ಅಂತ ಕರೆಯುತ್ತಾರೆ. ಇದೀಗ ಶುಬ್ಮನ್ ಗಿಲ್ ತನ್ನ ಗೆಳೆಯ ಹಾಗೂ 19 ವಯೋಮಿತಿ ತಂಡದ ನಾಯಕ ಪೃಥ್ವಿ ಶಾ ಅವರ ಸ್ಥಾನವನ್ನು ಅಕ್ರಮಿಸಿಕೊಂಡಿದ್ದಾರೆ. ಗಿಲ್ ಗಿಂತ ಮೊದಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಪೃಥ್ವಿ ಶಾ ಅವರು ನಿರೀಕ್ಷಿತಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ನಲ್ಲಿ ಗಿಲ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಗಿಲ್ ಅವರು ಯಾವ ಕ್ರಮಾಂಕದಲ್ಲಿ ಆಡ್ತಾರೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ರಾಹುಲ್ ಕೆಳ ಕ್ರಮಾಂಕದಲ್ಲಿ ಆಡಿದ್ರೆ ಶುಬ್ಮನ್ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇಲ್ಲದಿದ್ರೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಕ್ರಿಕೆಟ್ ತಾಂತ್ರಿಕತೆಗಳನ್ನು ಮೈಗೂಡಿಸಿಕೊಂಡಿರುವ ಗಿಲ್ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ. ಇದೀಗ ತನ್ನ ಮೊದಲ ಅಗ್ನಿ ಪರೀಕ್ಷೆಯಲ್ಲಿ ಗಿಲ್ ಯಾವ ರೀತಿ ಆಡ್ತಾರೋ ಅನ್ನೋದು ಕುತೂಹಲ ಮೂಡಿಸಿದೆ.
ಏನೇ ಆಗ್ಲಿ, ಸದ್ಯದ ಯುವ ಪ್ರತಿಭೆಗಳಲ್ಲಿ ಶುಬ್ಮನ್ ಗಿಲ್ ಒಂದು ಹೆಜ್ಜೆ ಮುಂದಿದ್ದಾರೆ. ಸಾಕಷ್ಟು ಭರವಸೆ ಮೂಡಿಸಿರುವ ಕಾರಣ ಗಿಲ್ ಅವರನ್ನು ಭವಿಷ್ಯದ ಆಟಗಾರ ಅಂತನೇ ಹೇಳಲಾಗುತ್ತಿದೆ. ಆಲ್ ದಿ ಬೆಸ್ಟ್ ಸುಬ್ಬಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










