ಮೈಸೂರು: ಎಟಿಎಂಗೆ ಹಣ ತುಂಬದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಎಲ್ ಎಂಟರ್‌ಪ್ರೈಸಸ್‌ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಕಂಪನಿ ಎಟಿಎಂಗೆ ಹಣ ತುಂಬುವ ಏಜೆನ್ಸಿ ಪಡೆದಿತ್ತು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣ ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡಿದ್ದ. ಆದರೆ, ಕೆಲವೆಡೆ ಹಣ ತುಂಬಿಲ್ಲ. ಹೀಗಾಗಿ ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಕ್ಯಾಶ್ ಲೋಡಿಂಗ್ ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ಆಕ್ಷಯ್ ಎಟಿಎಂಗೆ ಹಣ ಹಾಕದೆ ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ತನಿಖೆ ನಡೆಸಿದಾಗ ಗದ್ದಿಗೆ ಗ್ರಾಮದ ಎಟಿಎಂನಲ್ಲಿ 5.80 ಲಕ್ಷ ಹಣ ಲೋಡ್ ಮಾಡದೆ, ಬ್ಯಾಗ್ ನಲ್ಲಿ ತುಂಬಿಸಿಕೊಂಡು ಹೋಗಿರುವುದು ಪತ್ತೆಯಾಗಿದೆ.
ಈ ಕೃತ್ಯಕ್ಕೆ ಆತನ ಪರಿಚಯದ ತೇಜಸ್ವಿನಿ ಎಂಬ ಮಹಿಳೆಯ ಕುಮ್ಮಕ್ಕು ಇದೆ ಎಂಬುವುದು ತಿಳಿದು ಬಂದಿದೆ. ಈ ಹಣದಿಂದ ಚಿನ್ನ ಖರೀದಿಸಿರುವ ಕುರಿತು ಮಾಹಿತಿ ಸಿಕ್ಕಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








