ತಿರುವನಂತಪುರಂ: ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಟ ಮೋಹನ್ ಲಾಲ್ ಅಮ್ಮ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಲಯಾಳಂ (Malayalam) ಚಿತ್ರರಂಗದಲ್ಲಿ ನಟರು ಹಾಗೂ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೋಹನ್ ಲಾಲ್ (Mohanlal) ರಾಜೀನಾಮೆ ನೀಡಿದ್ದಾರೆ. ಅಮ್ಮ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಮಲಯಾಳಂ ಉದ್ಯಮದಲ್ಲಿ ಮಹಿಳಾ ವೃತ್ತಿಪರರಿಗೆ ಲೈಂಗಿಕ ಕಿರುಕುಳ ಮತ್ತು ನಿಂದನೆ ಕುರಿತು ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ. ಅಲ್ಲದೇ, ಈಗ ಮಲಯಾಳಂನಲ್ಲಿ ಈ ವಿಷಯವಾಗಿ ತೀವ್ರ ಆಕ್ರೋಶ ಕೇಳಿ ಬಂದಿದೆ.
ಅಮ್ಮ’ ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಲಾಗಿದೆ ಎಂದು ಪತ್ರಿಕಾ ಟಿಪ್ಪಣಿ ಹೇಳಿದೆ. “ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸಾಮಾಜಿಕ-ದೃಶ್ಯ-ಮುದ್ರಿತ ಮಾಧ್ಯಮಗಳಲ್ಲಿ ‘ಅಮ್ಮ’ ಸಂಸ್ಥೆಯ ಆಡಳಿತ ಸಮಿತಿಯ ಕೆಲವು ಪದಾಧಿಕಾರಿಗಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಅಮ್ಮ’ ಆಡಳಿತ ಸಮಿತಿ ನೈತಿಕ ಹೊಣೆಗಾರಿಕೆಯ ಆಧಾರದಲ್ಲಿ ರಾಜೀನಾಮೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.