ಬೆಂಗಳೂರು: ದಂತವೈದ್ಯಕೀಯ (ಪಿಜಿಇಟಿ- ಎಂಡಿಎಸ್-24) ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ.3 ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಛಾಯ್ಸ್-2 ಆಯ್ಕೆ ಮಾಡಿ, ಶುಲ್ಕ ಪಾವತಿಸಿರುವವರು, ಛಾಯ್ಸ್-3 ನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ, ಯಾವುದೇ ಸೀಟು ಹಂಚಿಕೆಯಾಗದೇ ಇರುವವರು ಆ.3ರಿಂದ ಕೆಇಎ ಕಚೇರಿಯಲ್ಲಿ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆ ಸಲ್ಲಿಸದಿದ್ದರೆ ಗೆ ಸೀಟು ಹಂಚಿಕೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆ.3 ರಂದು ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಆ. 4ರಿಂದ 6ರ ವರೆಗೆ ಆಯ್ಕೆಗಳನ್ನು ದಾಖಲಿಸಲು ಸಮಯ ನೀಡಲಾಗುತ್ತದೆ. ಆ.7ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಆ.8ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆನಂತರವೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಲು ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.13 ಕೊನೆ ದಿನ ಎಂದು ತಿಳಿಸಿದ್ದಾರೆ.








