ಮತ್ತೆ ಪುಷ್ಪ ಸಿನಿಮಾದ ಆಕ್ಷನ್ ವಿಡಿಯೋ ಲೀಕ್ ..!
ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದ ಕೆಲವೊಂದು ದೃಶ್ಯಗಳು ಸತತವಾಗಿ ಲೀಕ್ ಆಗ್ತಲೇ ಇದ್ದು, ಸಿನಿಮಾತಂಡ ಕಂಗೆಟ್ಟುಹೋಗಿದೆ.. ಈ ನಡುವೆ ಸಿನಿಮಾದ ಮತ್ತೊಂದು ವಿಡಿಯೋ ಲೀಕ್ ಆಗಿದೆ.. ಫೈಟ್ ದೃಶ್ಯದ ವಿಡಿಯೋ ಲೀಕ್ ಆಗಿದೆ. ಇತ್ತೀಚೆಗಷ್ಟೇ ಪುಷ್ಪ ಸಿನಿಮಾದ 18 ಸೆಕೆಂಡ್ ಗಳ ಫೈಟ್ ದೃಶ್ಯದ ವಿಡಿಯೋ ಒಂದು ಲೀಕ್ ಆಗಿತ್ತು. ಈಗ ಸಿನಿಮಾದ ಮತ್ತೊಂದು ವಿಡಿಯೋ ಲೀಕ್ ಆಗಿದ್ದು, ಸಿನಿಮಾತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಹೊಸದಾಗಿ ಲೀಕ್ ಆಗಿರುವ ವಿಡಿಯೋವನ್ನು ಚಿತ್ರತಂಡವು ಇಂಟರ್ನೆಟ್ ನಿಂದ ತೆಗಿಸುವ ಕಾರ್ಯದಲ್ಲಿ ತೊಡಗಿದೆ.. ಈವರೆಗೂ ಪುಷ್ಪ ಸಿನಿಮಾದ ಸುಮಾರು 30 ನಿಮಿಷದ ವಿಡಿಯೋ ಲೀಕ್ ಆಗಿರೋದಾಗಿ ತಿಳಿದುಬಂದಿದೆ..
ಈ ಹಿಂದೆ 18 ಸೆಕೆಂಡ್ ಗಳ ವಿಡಿಯೋ ಲೀಕ್ ಆದ ಮೊಬೈಲ್ ನಿಂದಲೇ ಇದೀಗ ಸಿನಿಮಾದ ಪ್ರಮುಖ ದೃಶ್ಯವೊಂದು ಲೀಕ್ ಆಗಿದೆ. ಮತ್ತೊಂದೆಡೆ ವಿಡಿಯೋ ಲೀಕ್ ಆಗಿರೋದಕ್ಕೆ ಸಿಟ್ಟಾಗಿರುವ ಅಲ್ಲು ಈ ಬಗ್ಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಮಾಣ ಸಂಸ್ಥೆಗೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ನಿರ್ಮಾಣ ಸಂಸ್ಥೆಯು ಪೋಸ್ಟ್ ಪ್ರೊಡಕ್ಷನ್ ರೂಂಗಳಿಗೆ ಯಾರೂ ಸಹ ಮೊಬೈಲ್ ತರಬಾರದು ಎಂದು ಹೊಸ ಆದೇಶವನ್ನು ಹೊರಡಿಸಿದೆ. ಪುಷ್ಪ ಭಾಗ 2ರ ಚಿತ್ರೀಕರಣವೂ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಆ ಸಿನಿಮಾದ ಸೆಟ್ ನಲ್ಲಿಯೂ ಮೊಬೈಲ್ ಬ್ಯಾನ್ ಮಾಡುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ.
ಅಂದ್ಹಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪಗೆ ಸುಕುಮಾರ್ ಆಕ್ಷನ್ ಕಟ್ ಹೇಳ್ತಿದ್ದು, ಕನ್ನಡದ ಕಿರಿಕ್ ರಾಣಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.. ಅಲ್ಲದೇ ಕನ್ನಡಿಗ ಡಾಲಿ ಧನಂಜಯ್, ಕಿಶೋರ್ ಸಹ ಮುಖ್ಯ ಪಾತ್ರಗಳಲ್ಲಿದ್ದಾರೆ. KGF ರೀತಿಯಲ್ಲೇ ಈ ಸಿನಿಮಾ ಸಹ 2 ಭಾಗಗಳಲ್ಲಿ ಮೂಡಿಬರಲಿದೆ. ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ..








