ಅಲ್ತಾಫ್ ಬುಖಾರಿ ಪಕ್ಷದ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಜನಸಂಖ್ಯಾ ವಿಷಯದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಅಲ್ತಾಫ್ ಬುಖಾರಿ ಹೇಳಿದರು.
ಹೊಸದಾಗಿ ರೂಪುಗೊಂಡ ಜೆಕೆ ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ ಅವರು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಚಿವರು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಂಖ್ಯಾ ವಿಷಯದಲ್ಲಿನ ಭೀತಿಯನ್ನು ನಿವಾರಿಸಿದರು ಮತ್ತು ಶೀಘ್ರವಾಗಿ ರಾಜ್ಯ ಸ್ಥಾನಮಾನವನ್ನು ಮತ್ತೆ ಮರಳಿಸುವ ಭರವಸೆ ನೀಡಿದರು ಎಂದು ಬುಖಾರಿ ಹೇಳಿದ್ದಾರೆ.
ಗೃಹ ಸಚಿವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯ ನಂತರ, ಪಕ್ಷದ ನಿಯೋಗವನ್ನು ಮುನ್ನಡೆಸಿದ ಉದ್ಯಮಿ ಮತ್ತು ರಾಜಕಾರಣಿ ಶ್ರೀ ಬುಖಾರಿ, ಜನಸಂಖ್ಯಾ ಬದಲಾವಣೆಯ ಕುರಿತು ಜನರ ಆತಂಕ, ರಾಜ್ಯತ್ವದ ಆರಂಭಿಕ ಪುನಃಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳು ಮತ್ತು ರಾಜಕೀಯ ಕೈದಿಗಳ ಬಿಡುಗಡೆ ಕುರಿತು ಚರ್ಚಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವರು ಪುನರುಚ್ಚರಿಸಿದ್ದಾರೆ ಮತ್ತು ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಶೀಘ್ರವಾಗಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ ಎಂದರು.
ಕಣಿವೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಾರ್ಟಿ(ಜೆಕೆಎಪಿ) ಎಂಬ ಹೊಸ ರಾಜಕೀಯ ಪಕ್ಷದ ಉಗಮವಾಗಿದ್ದು, ಇದು ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಗೆ ಪರ್ಯಾಯವಾದ ರಾಜಕೀಯ ಸಿದ್ಧಾಂತ ಹೊಂದಿರುವುದಾಗಿ ಸ್ಪಷ್ಟಪಡಿಸಿದೆ. ಮಾಜಿ ಸಚಿವ ಅಲ್ತಾಫ್ ಬುಖಾರಿ ಮತ್ತು ವಿವಿಧ ಪಕ್ಷಗಳ 30 ನಾಯಕರು ಸೇರಿ ಈ ಪಕ್ಷವನ್ನು ರಚಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನಸ್ಥಾಪಿಸಿ ಶಿಕ್ಷಣ, ಉದ್ಯೋಗ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವಂತೆ ಮಾಡುವ ಸಲುವಾಗಿ ಈ ಪಕ್ಷ ರಚಿಸಲಾಗಿದೆ ಎಂದು ಅಲ್ತಾಫ್ ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾರೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ, ಗೃಹ ಸಚಿವರು ನಿಯೋಗಕ್ಕೆ ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶ್ರೀ ಬುಖಾರಿ ಹೇಳಿದರು
ಪ್ರಧಾನಿ ನರೇಂದ್ರ ಮೋದಿಯವರನ್ನು ನಿಯೋಗ ಭೇಟಿ ಮಾಡಿದ ಒಂದು ದಿನದ ನಂತರ ಈ ಭೇಟಿ ನಡೆದಿದೆ.
ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮತ್ತೆ ಮರಳಿಸಲಾಗುವುದು ಎಂದು ಪ್ರಧಾನಿ ಮೋದಿ ಕಣಿವೆಯ ನೂತನ ರಾಜಕೀಯ ಪಕ್ಷದ ಸದಸ್ಯರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು.
ಜೆಕೆ ಅಪ್ನಿ ಪಕ್ಷದ ಮುಖ್ಯಸ್ಥರು ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ಸ್ವಾಯತ್ತತೆ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆ ಬರೆಯುವ ಕೇಂದ್ರಾಡಳಿತ ಪ್ರದೇಶದ ಯುವಕರಿಗೆ ವಯಸ್ಸು ಸಡಿಲಿಸುವುದು, ಪ್ರವಾಸೋದ್ಯಮ ಕ್ಷೇತ್ರದ ಹೊರತಾಗಿ ತೋಟಗಾರಿಕೆ ಮತ್ತು ಕೃಷಿಯಲ್ಲಿ ಪರಿಹಾರ ಸೇರಿದಂತೆ ಹಲವಾರು ಇತರ ವಿಷಯಗಳನ್ನು ಪ್ರಸ್ತಾಪಿಸಿದರು.








