ಅಮರನ್ ಚಿತ್ರವು ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದ ಸ್ಫೂರ್ತಿದಾಯಕ ಕಥೆಯನ್ನು ಆಧರಿಸಿದ ಸಿನಿಮಾ . ಶೌರ್ಯ ಮತ್ತು ತ್ಯಾಗದ ಕುರಿತಾದ ಓರ್ವ ಯೋಧನ ಜೀವನವನ್ನು ಆಧರಿಸಿದ ಸಿನಿಮಾ ಕತೆ ಇದಾಗಿದ್ದು, ದೇಶಭಕ್ತಿ, ಪ್ರೀತಿ ಮತ್ತು ತ್ಯಾಗದ ಹೃದಯಸ್ಪರ್ಶಿ ಕತೆಯನ್ನು ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಮನಮುಟ್ಟುವ ರೀತಿಯಲ್ಲಿ ನಿರೂಪಿಸಿದ್ದಾರೆ. ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅವರ ಅದ್ಭುತ ಅಭಿನಯದಿಂದಾಗಿ, ಈ ಚಿತ್ರ ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ನೀಡುತ್ತದೆ.
ಶಿವಕಾರ್ತಿಕೇಯನ್, ಅಶೋಕ್ ಚಕ್ರ ಪುರಸ್ಕೃತ ಮೇಜರ್ ಮುಕುಂದ ವರದರಾಜನ್ ಪಾತ್ರದಲ್ಲಿ, ಶಿಸ್ತಿನಿಂದ ಕೂಡಿದ ಸೈನಿಕನ ಪಾತ್ರವನ್ನು ಶ್ರದ್ಧೆಯೊಂದಿಗೆ ನಿರ್ವಹಿಸಿದ್ದಾರೆ. ಸೈನಿಕನ ಗಂಭೀರತೆಯ ಜೊತೆಗೆ ಪತ್ನಿಯ ಮೇಲೆ ಇರುವ ಪ್ರೀತಿಯನ್ನು ಅವರು ಮನಮೋಹಕವಾಗಿ ವ್ಯಕ್ತಪಡಿಸಿದ್ದಾರೆ. ಸಾಯಿ ಪಲ್ಲವಿ, ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ, ಅವರ ಹೃದಯದ ಭಾವನೆಗಳು ತ್ಯಾಗಗಳ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ವಿಶೇಷವಾಗಿ, ಇಂಧು-ಮುಕುಂದ್ ರ ಪ್ರೀತಿಯ ಕ್ಷಣಗಳು ಹೃದಯಸ್ಪರ್ಶಿಯಾಗಿ ಮೂಡಿಬಂದಿವೆ.
ಚಿತ್ರದ ಕಥಾ ಹಂದರ ವಿಭಿನ್ನವಾಗಿದೆ. ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ತಮ್ಮ ನಟನೆಯ ಮೂಲಕ ಕಥೆಯನ್ನು ಜೀವಂತಗೊಳಿಸಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಕೇವಲ ಸಿನೆಮಾ ಎಂದು ಮಾತ್ರ ಕಾಣದೆ, ಸೈನಿಕರ ಜೀವನದ ಸವಾಲು ಮತ್ತು ಅವರ ತ್ಯಾಗಗಳಿಗೆ ಗೌರವ ಸಲ್ಲಿಸುವ ಶ್ರದ್ಧಾಂಜಲಿ ಎಂದು ಪರಿಗಣಿಸಿದ್ದಾರೆ.
ರಾಜ್ಕುಮಾರ್ ಪೆರಿಯಾಸಾಮಿ, ಕಾಶ್ಮೀರದ ರಾಜಕೀಯ ಪರಿಸ್ಥಿತಿಯನ್ನು ಮತ್ತು ಸೈನಿಕರ ಜೀವನದ ಕಷ್ಟಗಳನ್ನು ಸಮತೋಲನದಿಂದ ಬಿಂಬಿಸಿದ್ದಾರೆ. ಕಾಶ್ಮೀರದ ಉಗ್ರವಾದ, ಭ್ರಷ್ಟಾಚಾರ ಮತ್ತು ಸ್ಥಳೀಯ ಜನರ ಜೀವನದ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಹಿನ್ನೆಲೆ ಸಂಗೀತವು ಸೈನಿಕರ ಸಾಹಸ ಮತ್ತು ಪ್ರೇಮಭರಿತ ಕ್ಷಣಗಳಿಗೆ ಪೂರಕವಾಗಿದೆ.
ಈ ಬಯೋಪಿಕ್ ಮೇಜರ್ ಮುಕುಂದ ಅವರ ಚಿಕ್ಕವಯಸ್ಸಿನಿಂದ ಹಿಡಿದು ಉಗ್ರರ ವಿರುದ್ಧದ ಕಾರ್ಯಾಚರಣೆ ವರೆಗಿನ ಜೀವನವನ್ನು ಚಿತ್ರಿಸುತ್ತದೆ.
ಇಂಧು ರೆಬೆಕಾ ವರ್ಗೀಸ್ (ಸಾಯಿ ಪಲ್ಲವಿ) ತನ್ನ ಪತಿ, ಮೇಜರ್ ಮುಕುಂದ್ ವರದರಾಜನ್ ತೋರಿದ ದೇಶಭಕ್ತಿ, ತ್ಯಾಗ ಮತ್ತು ಶೌರ್ಯಕ್ಕೆ ಮರಣೋತ್ತರವಾಗಿ ನೀಡಲಾದ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಸ್ವೀಕರಿಸಲು ನವದೆಹಲಿಗೆ ಪ್ರಯಾಣಿಸುವುದರೊಂದಿಗೆ ಚಲನಚಿತ್ರವು ಪ್ರಾರಂಭವಾಗುತ್ತದೆ.
ಅಲ್ಲಿಂದ ಮುಕುಂದ್ ಕಥೆ ತೆರೆದುಕೊಳ್ಳುತ್ತದೆ ಮತ್ತು ಅಂತಿಮವಾಗಿ, ದುರಂತವೊಂದರಲ್ಲಿ ಮುಕುಂದ್ ತನ್ನ 31 ನೇ ವಯಸ್ಸಿಗೆ ಪ್ರಾಣವನ್ನು ಕಳೆದುಕೊಳ್ಳುತ್ತಾನೆ.
ಅಶೋಕ ಚಕ್ರ ಪುರಸ್ಕೃತ ಈ ಯೋಧನ ಶೌರ್ಯ ಮತ್ತು ತ್ಯಾಗವು ಬಹಳ ಹೃದಯಸ್ಪರ್ಶಿಯಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಈ ಸಿನಿಮಾವನ್ನು ಕಣ್ಣೀರಿನಿಂದಲೇ ವೀಕ್ಷಿಸಿದ್ದಾರೆ.
ಚಿತ್ರವು ಕೇವಲ ಸೈನಿಕನ ಕಥೆಯನ್ನು ಮಾತ್ರವಲ್ಲದೆ, ಅವರ ಕುಟುಂಬದ ತ್ಯಾಗವನ್ನೂ ಹೇಳುತ್ತದೆ. ಪ್ರೀತಿ, ವಿದಾಯದ ನೋವು, ಮತ್ತು ದೇಶಕ್ಕಾಗಿ ಸೈನಿಕನಿಗಿರುವ ಹೊಣೆಗಾರಿಕೆಯನ್ನು ಈ ಚಿತ್ರವು ಆಳವಾಗಿ ನಿರೂಪಿಸುತ್ತದೆ. ಇಂಧು, ನಾನು ನನ್ನ ಪ್ರೀತಿಯೊಂದಿಗೆ ಶಾಶ್ವತವಾಗಿ ದೂರದ ಸಂಬಂಧದಲ್ಲಿದ್ದೇನೆ ಎಂದು ಹೇಳುವಾಗ, ಪ್ರತಿ ಪ್ರೇಕ್ಷಕನ ಹೃದಯವು ಆಳುತ್ತದೆ. ಅಮ್ಮಾ….ಮುಂದಿನ ರಜೆಗೆ ಅಪ್ಪಾ ಬರ್ತಾರಲ್ವಾ? ಎಂಬ ಪ್ರಶ್ನೆಯನ್ನು ಮಗಳು ಕೇಳುವಾಗ, ಉತ್ತರ ಕೊಡಲಾಗದೆ ಅಮ್ಮನ ಮುಖದಲ್ಲಿನ ಕಣ್ಣೀರು, ಅವಳ ಮನಸ್ಸಿನಲ್ಲಿ ತೋರುವ ನೋವು ಮತ್ತು ನಿರಾಶೆ ಪ್ರೇಕ್ಷಕರನ್ನು ಆವರಿಸುತ್ತದೆ.
ಸೈನಿಕರ ಕುಟುಂಬವು ನಮಗಾಗಿ ಅದೆಷ್ಟು ತ್ಯಾಗ ಮಾಡುತ್ತದೆ ಎನ್ನುವ ಪ್ರತಿ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಲು ಈ ಸಿನಿಮಾವನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ನೋಡಲೇಬೇಕು. ದೇಶಭಕ್ತಿ ಮತ್ತು ತ್ಯಾಗದ ಮಹತ್ವವನ್ನು ಸ್ಮರಿಸುವಂತೆ ಮಾಡುವ ಅಮರನ್ ಚಿತ್ರ, ಕೇವಲ ಸೈನಿಕರ ಬಗ್ಗೆ ಮಾತ್ರವಲ್ಲ, ಪ್ರೀತಿಯ ಆಳ ಮತ್ತು ಕುಟುಂಬದ ತ್ಯಾಗವನ್ನು ಬಿಂಬಿಸುವ ಹೃದಯಸ್ಪರ್ಶಿ ಚಲನಚಿತ್ರವಾಗಿದೆ.