ಸ್ಯಾಂಡಲ್ವುಡ್ನ ಮೊದಲ ಚಿತ್ರವೊಂದು ಡಿಜಿಟಲ್ ಪ್ಲಾಟ್ಫಾರಂನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ `ಲಾ ‘ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜುಲೈ17 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 200 ದೇಶಗಳಲ್ಲಿ ಬಿಡುಗಡೆಯಾಗಲಿದೆ.
`ಲಾ’ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ ರಾಗಿಣಿ ಚಂದ್ರನ್. ಕನ್ನಡದ `ಲಾ’ ಸಿನಿಮಾ ಬಿಡುಗಡೆಯ ಬಗ್ಗೆ ನಾಯಕಿ ಬಹಳ ಉತ್ಸುಕರಾಗಿದ್ದಾರೆ. `ಲಾ’ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ ರಾಗಿಣಿ ಚಂದ್ರನ್.
`ಲಾ’ ಚಿತ್ರ ಕ್ರೈಂ ಥ್ರಿಲ್ಲರ್ ಕಥೆಯನ್ನ ಹೊಂದಿದ್ದು, ಇಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಸುತ್ತ ಕಥೆ ಹೆಣೆಯಲಾಗಿದೆ. ಆಸಕ್ತಿಕರ ನಿರೂಪಣೆ ಈ ಚಿತ್ರದ ಪ್ಲಸ್ ಪಾಯಿಂಟ್ ಎನ್ನುತ್ತಾರೆ ರಾಗಿಣಿ ಚಂದ್ರನ್.
ತಾವು ಈ ಸಿನಿಮಾದಲ್ಲಿ ಅಭಿನಯಿಸಲು ಈ ಚಿತ್ರಕಥೆಯೇ ಕಾರಣ. ನಿರ್ದೇಶಕ ರಘು ಸಮರ್ಥ್ ಚಿತ್ರದ ಬಗ್ಗೆ ಹೇಳಿದಾಗ ಸ್ಕ್ರಿಪ್ಟ್ ಇಷ್ಟವಾಗಿದ್ದರಿಂದ ಈ ಚಿತ್ರದಲ್ಲಿ ಅಭಿನಯಿಸಿದ್ದಾಗಿ ತಿಳಿಸಿದ್ದಾರೆ.
ರೊಮ್ಯಾಂಟಿಕ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುವುದು ನನಗೆ ಇಷ್ಟವಿರಲಿಲ್ಲ. ಚಾಲೆಂಜಿಂಗ್ ಪಾತ್ರ ಹಾಗೂ ಉತ್ತಮ ಚಿತ್ರಕಥೆ ಹೊಂದಿರುವ `ಲಾ’ ಚಿತ್ರದಲ್ಲಿ ಅಭಿನಯಿಸಿರುವುದು ತಮಗೆ ಸಂತಸದ ವಿಚಾರ ಎನ್ನುತ್ತಾರೆ ರಾಗಿಣಿ ಚಂದ್ರನ್.
`ಲಾ’ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಎಂ.ಗೋವಿಂದ ನಿರ್ಮಾಪಕರಾಗಿದ್ದು, ರಘು ಸಮರ್ಥ್ ನಿರ್ದೇಶಕರು. ರಾಗಿಣಿ ಚಂದ್ರನ್ ಪ್ರಮುಖ ಪಾತ್ರದಲ್ಲಿರೋ ಈ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ ಅಭಿನಯಿಸಿದ್ದಾರೆ.