ರಾಗಿಮುದ್ದೆಯೊಂದಿಗೆ ರಾಜ್ ಕುಮಾರ್ ನೆನಪನ್ನು ಹಂಚಿಕೊಂಡ ಅಂಬಿಕಾ
ಬೆಂಗಳೂರು, ಜುಲೈ 5: ಪರಭಾಷೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿಯರಲ್ಲಿ ಅಂಬಿಕಾ ಕೂಡ ಒಬ್ಬರು. ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅಂಬಿಕಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶ್ರೀನಾಥ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಎಲ್ಲ ಪ್ರಮುಖ ನಾಯಕರೊಂದಿಗೂ 80 ರ ದಶಕದಲ್ಲಿ ತೆರೆಹಂಚಿಕೊಂಡಿದ್ದರು.
ಇತ್ತೀಚೆಗೆ ಅಂಬಿಕಾ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದು, ಕನ್ನಡ ಕಿರುತೆರೆಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಾ. ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಿದ್ದ ಎರಡು ಕನ್ನಡ ಚಿತ್ರಗಳ ಸಂದರ್ಭದ ಸವಿನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ.
ನಟಿ ಅಂಬಿಕಾ ‘ಅಪೂರ್ವ ಸಂಗಮ’ ಚಿತ್ರದಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರು ನಡೆಸಿ ಕೊಡುತ್ತಿದ್ದ ಸಂಗೀತ ರಾತ್ರಿಗಳಲ್ಲಿ ಅವರೊಂದಿಗೆ ನಾನೂ ಕೂಡ ಹಾಡುತ್ತಿದ್ದೆ ಎಂದು ಸ್ಮರಿಸಿಕೊಂಡಿದ್ದಾರೆ.
ಚಲಿಸುವ ಮೋಡಗಳು ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ರಾಗಿಮುದ್ದೆಯ ರುಚಿಯನ್ನು ಸವಿದಿರುವುದಾಗಿ ಹೇಳಿಕೊಂಡಿರುವ ಅಂಬಿಕಾ, ರಾಜ್ ಕುಮಾರ್ ಅವರ ಕಾರಣದಿಂದ ‘ಚಲಿಸುವ ಮೋಡಗಳು’ ಚಿತ್ರೀಕರಣದ ಸೆಟ್ನಲ್ಲಿ ಮೊದಲ ಬಾರಿಗೆ ರಾಗಿ ಮುದ್ದೆ ತಿಂದಿದ್ದೆ ಎಂದು ನೆನಪಿನ ಬುತ್ತಿಯನ್ನು ಬಿಚ್ಚಿದ್ದಾರೆ.