ಅಮೆರಿಕಾ ರಾಷ್ಟ್ರ ಭಾರತದ ಅತಿದೊಡ್ಡ ವ್ಯಾಪಾರ ಪಾಲದಾರನಾಗಿ ಹೊರಹೊಮ್ಮಿದೆ. ಈ ಬಗ್ಗೆ ವಾಣಿಜ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಭಾರತದ ಅತಿದೊಡ್ಡ ಪಾಲುದಾರನಾಗಿದ್ದ ಚೀನಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೂ ಮುನ್ನ ಈ ಅಂಕಿ-ಅಂಶ ಹೊರಬಿದ್ದಿದ್ದು ಚೀನಾವನ್ನು ನಿದ್ದೆಗೆಡಿಸುವಂತೆ ಮಾಡಿದೆ.
2018-19ನೇ ಅವಧಿಯಲ್ಲಿ ಅಮೆರಿಕಾ ಹಾಗೂ ಭಾರತದ ನಡುವೆ ರೂ.6.32ಲಕ್ಷ ಕೋಟಿ ದ್ವಿಪಕ್ಷೀಯ ವ್ಯವಹಾರ ನಡೆದಿದೆ. ಹಾಗೇ ಭಾರತ ಹಾಗೂ ಚೀನಾ ನಡುವೆ ರೂ.6.25ಲಕ್ಷ ಕೋಟಿ ವ್ಯವಹಾರ ನಡೆದಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ತಿಳಿಸಲಾಗಿದೆ. ಉಭಯ ದೇಶಗಳ ಮಧ್ಯೆ ಇರುವ ಮುಕ್ತ ವ್ಯಾಪಾರದ ಹೊಂದಾಣಿಕೆಯ ಫಲ ಇದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.








