ಅಮೆರಿಕಾದಲ್ಲಿ ಭಾರತೀಯನಿಗೆ 2ವರ್ಷ ಜೈಲು – ಕೋವಿಡ್ ನಿಧಿಗೆ 13 ಕೋಟಿ ರೂ. ವಂಚನೆ ಆರೋಪ
ಅಮೆರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಲ್ಲಿನ ಅಲ್ಲಿನ ನ್ಯಾಯಾಲಯ ವಿಧಿಸಿದೆ. ಅಮೆರಿಕದ ಕೋವಿಡ್ 19 ವಿಪತ್ತು ಪರಿಹಾರ ಸಾಲದಲ್ಲಿ ಸುಮಾರು 1.8 ಮಿಲಿಯನ್ ಅಮೆರಿಕ ಡಾಲರ್ ಅಂದ್ರೆ ಹತ್ತಿರ ಹತ್ತಿರ 13 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ಭಾರತ ಮೂಲದ ಟೆಕ್ ಎಕ್ಸಿಕ್ಯೂಟಿವ್ ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಾಷಿಂಗ್ಟನ್ನ ಕ್ಲೈಡ್ ಹಿಲ್ ನಲ್ಲಿ ನೆಲೆಸಿದ್ದ ಮುಕುಂದ್ ಮೋಹನ್ ಮಾರ್ಚ್ 15 ರಂದು ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
ಮೋಹನ್ ಅವರು ತಾವು ನಡೆಸುತ್ತಿದ್ದ ಕಂಪನಿಗಳಿಗೆ ಸರ್ಕಾರದ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ ಮೂಲಕ ಮೋಸದಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ನಕಲಿ ಉದ್ಯೋಗ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ನಕಲಿ ದಾಖಲೆಗಳನ್ನು ಬಳಸಿ 5.5 ಮಿಲಿಯನ್ ಅಮೆರಿಕ ಡಾಲರ್ ಸಾಲಕ್ಕೆ ಅರ್ಜಿ ಸಲ್ಲಿಸಿ 1.8 ಮಿಲಿಯನ್ ಪಡೆದಿದ್ದರು ಎನ್ನುವ ಆರೋಪದಡಿ ಜುಲೈ 2020ರಲ್ಲಿ ಅವರನ್ನು ಬಂಧಿಸಲಾಗಿತ್ತು.
ಮೋಹನ್ ಅವರಿಗೆ ಮಂಗಳವಾರ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಮೋಹನ್ 8 ವಿಪತ್ತು ಸಾಲದ ಅರ್ಜಿಗಳನ್ನು ಸಲ್ಲಿಸಿದ್ದರು ಎನ್ನಲಾಗಿದೆ. ಸಾಲದ ಅರ್ಜಿಗಳಿಗೆ ಬೆಂಬಲವಾಗಿ ನಕಲಿ ಮತ್ತು ತಿರುಚಲಾದ ದಾಖಲೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ನಕಲಿ ಫೆಡರಲ್ ತೆರಿಗೆ ಫೈಲಿಂಗ್ ಗಳು ಸಹ ಇದ್ದವು ಎನ್ನಲಾಗಿದೆ.








