ಟೀಕಿಸುವವರ ವಿರುದ್ಧ ಬೇಹುಗಾರಿಕೆ ತಂತ್ರಜ್ಞಾನ ಬಳಕೆ ಖಂಡನೀಯ : ಅಮೆರಿಕಾ
ಇಸ್ರೇಲ್ ಮೂಲದ ಕಂಪನಿ ಪೆಗಾಸಸ್ ಬೇಹುಗಾರಿಕೆಯಲ್ಲಿ ವಿರೋಧ ಪಕ್ಷಗಳ ನಾಯಕರು , ಹೋರಾಟಗಾರರು , ಪತ್ರಕರ್ತರು ಸೇರಿ ಅನೇಕರ ಫೋನ್ ಗಳು ಹ್ಯಾಕ್ ಆಗಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿ ಸಂಚಲನ ಸೃಷ್ಟಿಸಿದೆ. ಈ ನಡುವೆ ಸರ್ಕಾರವನ್ನು ಟೀಕಿಸುವವರು, ಪತ್ರಕರ್ತರು ಹಾಗೂ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವ ಸಲುವಾಗಿ ಗೂಢಚರ್ಯೆ ತಂತ್ರಜ್ಞಾನ ಬಳಸುವುದನ್ನು ವಿರೋಧಿಸುವುದಾಗಿ ಅಮೆರಿಕ ಹೇಳಿದೆ.
ಪೆಗಾಸಸ್ ತಂತ್ರಾಂಶವನ್ನು ಗೂಢಚರ್ಯೆಗಾಗಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್ ನ್ಯಾಯಾಲಯಗಳ ಆದೇಶವಿಲ್ಲದೇ, ಈ ರೀತಿ ಗೂಢಚರ್ಯೆ ನಡೆಸುವುದು ಕಳವಳಕಾರಿ ಎಂದಿದ್ದಾರೆ. ಭಾರತದಲ್ಲಿ ಪೆಗಾಸಸ್ ತಂತ್ರಾಂಶವನ್ನು ದುರ್ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ತಮಗೆ ನಿರ್ದಿಷ್ಟ ಮಾಹಿತಿ ಇಲ್ಲ ಎಂದೂ ಲೂಡ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇದೇನು ಸಣ್ಣ ವಿಷಯವಲ್ಲ. ಕಂಪನಿಗಳು ತಾವು ಅಭಿವೃದ್ಧಿಪಡಿಸುವ ತಂತ್ರಾಂಶವನ್ನು ಗೂಢಚರ್ಯೆಗೆ ಬಳಸದಂತೆ ತಡೆಯುವುದನ್ನು ಖಾತರಿಪಡಿಸಬೇಕು. ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.








