ವಾಷಿಂಗ್ಟನ್, ಮೇ 17: ಕೊರೋನಾ ವೈರಸ್ ಸೋಂಕಿನಿಂದ ಕಂಗೆಟ್ಟಿರುವ ಅಮೆರಿಕಾ ಸೋಂಕನ್ನು ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದೆ. ಕೊರೋನಾ ಸೋಂಕನ್ನು ಸದೆಬಡಿಯಲು ಅವಿರತವಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ವೈಟ್ ಹೌಸ್ ಕಛೇರಿಯಲ್ಲಿ ಆಹ್ವಾನಿಸಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊರೊನಾ ಸಮರದಲ್ಲಿ ನಿರತರಾಗಿದ್ದ ನರ್ಸ್ ಗಳಿಗೆ, ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಕುಕ್ಕೀಸ್ ನೀಡಿ ಅವರ ಸೇವೆಗೆ ಧನ್ಯವಾದ ಹೇಳಿದ ಮೇರಿ ಲ್ಯಾಂಡ್ ಸ್ಕೌಟ್ಸ್ ತಂಡದ ಮೂವರು ಬಾಲಕಿಯರನ್ನು ಕೂಡ ಗುರುತಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಅವರ ಪತ್ನಿಯಿಂದ ಅಭಿನಂದಿಸಲ್ಪಟ್ಟ ಮೂರು ಮಂದಿ ಬಾಲಕಿಯರಲ್ಲಿ ಒಬ್ಬ ಬಾಲಕಿ ಭಾರತೀಯ ಮೂಲದವಳು. ಭಾರತ ಮೂಲದ ಬಾಲಕಿಯ ಹೆಸರು ಶ್ರಾವ್ಯ ಅಣ್ಣಪ್ಪ. 10 ರ ಹರೆಯದ ಶ್ರಾವ್ಯ, ಹ್ಯಾನೋವರ್ ಹಿಲ್ಸ್ ಎಲಿಮೆಂಟರಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದು, ಗರ್ಲ್ ಸ್ಕೌಟ್ಸ್ ಟ್ರೂಪ್ ಸದಸ್ಯೆಯಾಗಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನವರಾದ ಈಕೆಯ ತಂದೆ ತಾಯಿ ಯುಎಸ್ ಮೇರಿಲ್ಯಾಂಡ್ ನಲ್ಲಿ ವಾಸವಾಗಿದ್ದಾರೆ. ಮೇರಿಲ್ಯಾಂಡ್ ನ ಎಲ್ಕ್ರಿಡ್ಜ್ ಮೂಲದ ಸ್ಕೌಟ್ಸ್ ಟ್ರೂಪ್ 744ರ ಬಾಲಕಿಯರಾದ ಲೈಲಾ ಖಾನ್, ಲಾರೆನ್ ಮ್ಯಾಟ್ನಿ ಮತ್ತು ಶ್ರಾವ್ಯ ಅಣ್ಣಪ್ಪ ರೆಡ್ಡಿ ಕೊರೊನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಯುಎಸ್ ನಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕೊರೋನಾ ಸೋಂಕನ್ನು ತಡೆಗಟ್ಟಲು ಶ್ರಮಿಸುತ್ತಿರುವ ನರ್ಸ್ ಗಳಿಗೆ, ಅಗ್ನಿಶಾಮಕ ಸಿಬ್ಬಂದಿಗಳಿಗೆ ಕುಕ್ಕೀಸ್ ನೀಡಿ ಅವರ ಸೇವೆಗೆ ಧನ್ಯವಾದ ಸಲ್ಲಿಸಿದ್ದರು. ಬಾಲಕಿಯರ ಕಾರ್ಯವನ್ನು ಗುರುತಿಸಿ ಮೆಚ್ಚಿಕೊಂಡಿರುವ ವೈಟ್ ಹೌಸ್ ಅವರಿಗೆ ಪ್ರಶಂಸಾ ಪತ್ರವನ್ನು ನೀಡಿ ಅಭಿನಂದಿಸಿದೆ. ಕೊರೋನಾದ ಈ ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ವಿರುದ್ಧದ ಹೋರಾಟದಲ್ಲಿ ಭಾಗಿಯಾದವರೆಲ್ಲರನ್ನೂ ಗೌರವಿಸುವುದು ಉತ್ತಮ ಕೆಲಸ ಹಾಗೂ ಇದು ಮತ್ತಷ್ಟು ಜನರಿಗೆ ಸ್ಪೂರ್ತಿ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.








