ವಾಷಿಂಗ್ಟನ್, ಜೂನ್ 1: ಅಮೆರಿಕದಲ್ಲಿ ಜನಾಂಗೀಯ ಘರ್ಷಣೆ ತೀವ್ರ ಸ್ವರೂಪ ಪಡೆದಿದ್ದು, ಸಾವು ನೋವು ಮತ್ತು ಲೂಟಿ ಪ್ರಕರಣಗಳು ಮುಂದುವರಿದಿದೆ. ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್, ಬಿಳಿ ವರ್ಣೀಯ ಪೊಲೀಸ್ ಅಧಿಕಾರಿಯ ಹಿಂಸೆಯಿಂದ ಮೃತಪಟ್ಟ ಬಳಿಕ ಅಮೆರಿಕದಲ್ಲಿ ಕಪ್ಪು ವರ್ಣೀಯರು ಭುಗಿಲೆದ್ದಿದ್ದು, ಪ್ರತಿಭಟನೆ ತೀವ್ರ ಹಿಂಸಾತ್ಮಕ ಸ್ವರೂಪ ಪಡೆದಿದೆ. ಅಮೆರಿಕದಲ್ಲಿ 25 ಕ್ಕೂ ಹೆಚ್ಚು ಪ್ರಮುಖ ನಗರಗಳು ಅಕ್ಷರಶಃ ರಣರಂಗವಾಗಿ ಹೊತ್ತಿ ಉರಿಯುತ್ತಿದೆ.
ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ ಪ್ರತಿಭಟನಾಕಾರರು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಉದ್ರಿಕ್ತ ಕಪ್ಪು ವರ್ಣೀಯರನ್ನು ಚದುರಿಸಲು ಆಶ್ರುವಾಯು ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಅನೇಕರಿಗೆ ಗಾಯಗಳಾಗಿವೆ.
ವೈಟ್ಹೌಸ್ ಎದುರು ಪ್ರತಿಭಟನಾಕಾರರು ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಶ್ವೇತಭವನದಲ್ಲಿರುವ ರಹಸ್ಯ ಭೂಗತ ಅಡಗುದಾಣದಲ್ಲಿ (ಅಂಡರ್ ಗ್ರೌಂಡ್ ಬಂಕರ್) ಕೆಲವು ಸಮಯ ಇರಿಸಿದರು ಎಂದು ವರದಿಗಳು ತಿಳಿಸಿವೆ.
ಪೊಲೀಸ್ ಅಧಿಕಾರಿ ಡೆರಿಕ್ ಚವಿನ್ ಎಂಬಾತ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಂಧಿಸಿ ಆತನ ಕುತ್ತಿಗೆಯನ್ನು ಮೊಣಕಾಲಗಳ ಮಧ್ಯೆ ಎಂಟು ನಿಮಿಷಗಳಿಗೂ ಹೆಚ್ಚು ಸಮಯ ಅದುಮಿ ಹಿಡಿದ ಪರಿಣಾಮವಾಗಿ ಫ್ಲಾಯ್ಡ್ ಉಸಿರು ಗಟ್ಟಿ ಮೃತಪಟ್ಟಿದ್ದ. ಪೊಲೀಸ್ ಅಧಿಕಾರಿಯ ಹಿಂಸೆ ಖಂಡಿಸಿ ಮಿನ್ಸಿಸೋಟಾದಲ್ಲಿ ಪ್ರಾರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅಮೆರಿಕದ ಪ್ರಮುಖ ನಗರವಾದ ಲಾಸ್ ಏಂಜಲೀಸ್, ಚಿಕಾಗೋ ಸೇರಿದಂತೆ 25ಕ್ಕೂ ಪ್ರಮುಖ ರಾಜ್ಯಗಳಿಗೆ ವ್ಯಾಪಿಸಿದ್ದು, ಭಾರೀ ಹಿಂಸಾಚಾರ ಮತ್ತು ಸಂಘರ್ಷಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ ಸಾವಿರಾರು ಜನರು ಬೀದಿಗಿಳಿದು ದೊಡ್ಡ ಮಾಲ್ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ದಾಳಿ ನಡೆಸಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್, ಕಾರುಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳಿಗೆ ಪ್ರತಿಭಟನೆಕಾರರು ಬೆಂಕಿ ಹಚ್ಚುತ್ತಿದ್ದಾರೆ ಮತ್ತು ತಡೆಯಲು ಬಂದವರನ್ನು ನಿರ್ದಯವಾಗಿ ಸಾಯಿಸುತ್ತಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಅಮೆರಿಕದಲ್ಲಿ ಪ್ರತಿಭಟನೆಕಾರರು ಸಾಮಾಜಿಕ ಅಂತರ ಕಾಯ್ಡುಕೊಳ್ಳದೇ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿರುವ ಹಿನ್ನಲೆಯಲ್ಲಿ, ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಹಿಂಸಾಚಾರ ಮತ್ತಷ್ಟು ಹಿಂಸಾತ್ಮಕ ರೂಪ ತಳೆದಿರುವ ಹಿನ್ನಲೆಯಲ್ಲಿ ಅಮೆರಿಕದ 50 ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ