ವಾಷಿಂಗ್ಟನ್: ಅಮೆರಿಕ ಆರ್ಥಿಕವಾಗಿ ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ಅಲ್ಲದೇ, ಜಗತ್ತಿನಲ್ಲಿ ಅತಿ ಹೆಚ್ಚು ಸಾಲಗಾರ ದೇಶ ಕೂಡ ಅಮೆರಿಕವೇ. ಸಾಲಗಳ ಮೇಲೆ ನಿಂತಿರುವ ಅಮೆರಿಕದ ಆರ್ಥಿಕತೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಕೆಲ ಆರ್ಥಿಕ ತಜ್ಞರು ಈಗ ಹೇಳುತ್ತಿದ್ದಾರೆ.
ಎಕ್ಸ್ ಪ್ಲಾಟ್ಫಾರ್ಮ್ನ ಮುಖ್ಯಸ್ಥ ಇಲಾನ್ ಮಸ್ಕ್, ಅಮೆರಿಕ ಈಗ ದಿವಾಳಿ ಆಗುತ್ತಿದೆ ಎಂದು ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಅಮೆರಿಕದ ಸಾಲಕ್ಕೆ ಕಟ್ಟಬೇಕಿರುವ ಹಣಕ್ಕೆ ಶೇ. 76ರಷ್ಟು ಆದಾಯ ತೆರಿಗೆ ಸಂಗ್ರಹ ಆಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
The Daily Hodl ಎಂಬ ಪತ್ರಿಕೆಯಲ್ಲಿ ಕೆಲ ದಿನಗಳ ಹಿಂದೆ ಆರ್ಥಿಕ ತಜ್ಞ ಇ.ಜೆ. ಆಂಟೋನಿ ಅವರ ಲೇಖನ ಪ್ರಕಟವಾಗಿತ್ತು. ಅಮೆರಿಕದ ಸೆಂಟ್ರಲ್ ಬ್ಯಾಂಕ್ ನ ಜೂನ್ ತಿಂಗಳ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಅವರು ಅಮೆರಿಕದ ಸಾಲದ ಬಗ್ಗೆ ಮಾಹಿತಿ ನೀಡಿದ್ದರು. ಸರ್ಕಾರ ಒಂದು ವರ್ಷದಲ್ಲಿ ಕಲೆಹಾಕುವ ಆದಾಯ ತೆರಿಗೆ ಹಣದಲ್ಲಿ ಶೇ. 76ರಷ್ಟು ಮೊತ್ತವು ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕಟ್ಟಲು ಮಾತ್ರ ಸಾಕಾಗುತ್ತದೆ ಎಂದು ವರದಿ ಹೇಳಿದೆ.
ವೈಯಕ್ತಿಕ ಆದಾಯ ತೆರಿಗೆಯು ಅಮೆರಿಕ ಸರ್ಕಾರದ ಅತಿದೊಡ್ಡ ಆದಾಯ ಮೂಲವಾಗಿದೆ. ಇದರ ಮುಕ್ಕಾಲು ಪಾಲು ಆದಾಯವು ಬಡ್ಡಿಕಟ್ಟುವುದರಲ್ಲೇ ಮುಗಿದುಹೋಗುತ್ತದೆ ಎಂದು ಪತ್ರಿಕೆಯಲ್ಲಿ ಹೇಳಲಾಗಿತ್ತು. ವರದಿಯಂತೆ ಅಮೆರಿಕದ ರಾಷ್ಟ್ರೀಯ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಹಣ ಈ ವರ್ಷ 1.14 ಟ್ರಿಲಿಯನ್ ಡಾಲರ್ ನಷ್ಟಾಗಬಹುದು. 95 ಲಕ್ಷ ಕೋಟಿ ರುಪಾಯಿಯಷ್ಟು ಹಣ ಅದು. ಅಂದರೆ ಭಾರತದ ಬಜೆಟ್ ನ ಎರಡು ಪಟ್ಟು ಹಣವು ಅಮೆರಿಕ ತನ್ನ ಸಾಲಕ್ಕೆ ಬಡ್ಡಿ ಕಟ್ಟಲು ಬಳಸುತ್ತದೆ ಎಂದರೆ, ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ಇಲಾನ್ ಮಸ್ಕ್ ಇದಕ್ಕೆ ಪ್ರತಿಕ್ರಿಯಿಸುತ್ತಾ, ‘ಅಮೆರಿಕ ದಿವಾಳಿಯಾಗುತ್ತಿದೆ’ ಎಂದಿದ್ದಾರೆ.