ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸದ್ದು ಮಾಡಿಸುವಂತ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಡೆಪ್ಯೂಟಿ ಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ದೆಹಲಿಯಲ್ಲಿ ಗುಪ್ತವಾಗಿ ಭೇಟಿ ಮಾಡಿಕೊಂಡಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಡಿಕೆಶಿ ಸಿಎಂ ಆಗಿ, ವಿಜಯೇಂದ್ರ ಡಿಸಿಎಂ ಆಗುವಂತೆ ಒಪ್ಪಂದ ನಡೆದಿತ್ತು. ಈ ಕುರಿತು ಇಬ್ಬರೂ ದೆಹಲಿಗೆ ಹೋಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು ಎಂದು ಯತ್ನಾಳ್ ತಿಳಿಸಿದ್ದಾರೆ.
ಅವರ ಪ್ರಕಾರ, ವಿಜಯೇಂದ್ರ ಸ್ವತಃ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಈ ರಾಜಕೀಯ ಡೀಲ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ‘ಪವರ್ ಅಡ್ಜಸ್ಟ್‌ಮೆಂಟ್’ ಕುರಿತು ಮಾತುಕತೆ ನಡೆದಿತ್ತು ಎಂಬ ಯತ್ನಾಳ್ ಅವರ ಹೇಳಿಕೆ ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಈ ಆರೋಪಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಈಗ ಹೊಸ ಕುತೂಹಲ, ಊಹಾಪೋಹಗಳಿಗೆ ಎದ್ದಿದ್ದು, ಕಾಂಗ್ರೆಸ್–ಬಿಜೆಪಿ ನಾಯಕರು ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕುತೂಹಲ ಮೂಡಿಸಿದೆ.








