ಕೋಲ್ಕತ್ತಾ, ಜೂನ್ 9: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಜನರನ್ನು ಉದ್ದೇಶಿಸಿ ಆನ್ಲೈನ್ ನಲ್ಲಿ ಭಾಷಣ ಮಾಡಲಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಮಾವೇಶ ನಡೆಸಲು ಅಸಾಧ್ಯವಾದ ಕಾರಣದಿಂದ ಇಂದು ಅಮಿತ್ ಶಾ ಅವರು ಆನ್ ಲೈನ್ ಮೂಲಕ ಜನರ ಬಳಿ ಮಾತನಾಡಲಿದ್ದಾರೆ.
ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ 9 ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ 9 ಅಂಶದ ಕಾರ್ಯತಂತ್ರವನ್ನು ರೂಪಿಸಿದೆ. ಇಂದಿನ ಭಾಷಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳನ್ನು ಅಮಿತ್ ಶಾ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮಿತ್ ಶಾ ಅವರ ಆನ್ ಲೈನ್ ಭಾಷಣಕ್ಕೆ ಪಶ್ಚಿಮ ಬಂಗಾಳದಲ್ಲಿರುವ 88 ಸಾವಿರ ಬೂತ್ಗಳ ಪೈಕಿ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗಿರುವ 65 ಸಾವಿರ ಬೂತ್ ಗಳನ್ನು ಗುರುತಿಸಲಾಗಿದೆ. ಆ ಬೂತ್ ಗಳಲ್ಲಿ ಒಂದು ಪೋನ್ ನಿಂದ ಕನಿಷ್ಟ 10 ಮಂದಿಗೆ ಲೈವ್ ಸ್ಟ್ರೀಮಿಂಗ್ ವೀಕ್ಷಣೆಯಲ್ಲಿ ಭಾಗವಹಿಸುವಂತೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು, ಮುಂದಿನ ವರ್ಷದ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ವೇದಿಕೆ ಸಜ್ಜುಗೊಳಿಸುತ್ತಿದೆ.








