ಶಿವಕುಮಾರ ಶ್ರೀಗಳ ಜನ್ಮ ದಿನದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ
ತುಮಕೂರು: ಪರಮಪೂಜ್ಯನೀಯ ನಡೆದಾಡುವ ದೇವರು ಡಾ. ಶಿವಕುಮಾರ್ ಶ್ರೀಗಳ 115 ನೇ ಜಯಂತಿ ನಿಮಿತ್ತ ಏ. 1 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 10.45 ಕ್ಕೆ ತುಮಕೂರಿನ ವಿವಿ ಹೆಲಿಪ್ಯಾಡ್ಗೆ ಅಮಿತ್ ಷಾ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಮೊದಲಿಗೆ ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಲಿರುವ ಅಮಿತ್ ಷಾ, ಪೂಜೆ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖುಬಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ವಿ ಸೋಮಣ್ಣ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ಸುತ್ತೂರು ದೇಶಿಕೆಂದ್ರ ಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಿದ್ದಲಿಂಗ ಶ್ರೀ ಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಮಠಾಧಿಶರು ಭಾಗಿಯಾಗಲಿದ್ದಾರೆ.
ಬಿಗಿ ಪೊಲೀಸ್ ಭದ್ರತೆ
ನಾಳೆ ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಹಾಗೂ ಮಠದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ತುಮಕೂರು ವಿವಿ ಹೆಲಿಪ್ಯಾಡ್ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ದಿನಗಳಿಂದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸೇರಿದಂತೆ ಎಎಸ್ಪಿ, ಡಿಎಸ್ಪಿಗಳು ಭಾಗಿಯಾಗಿದ್ದಾರೆ.









