ಇಂದು ಪ್ರಧಾನಿ ಮೋದಿಯವರು ಮಾಡಲಿರುವ ಭಾಷಣ ಆಲಿಸುವಂತೆ ಅಮಿತ್ ಶಾ ಟ್ವೀಟ್
ಹೊಸದಿಲ್ಲಿ, ಜೂನ್ 30: ಪ್ರಧಾನಿ ಮೋದಿ ಇಂದು ಸಂಜೆ 4 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಲ್ಲರ ಚಿತ್ತ ಪ್ರಧಾನಿ ಮೋದಿ ಏನು ಹೇಳಲಿದ್ದಾರೆ ಎಂಬುದರ ಕಡೆ ನೆಟ್ಟಿದೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದು, ಇಂದು ಸಂಜೆ 4 ಗಂಟೆಗೆ ನೀವು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿರುವುದನ್ನು ಕೇಳಲೇಬೇಕು ಎಂದು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ರಾತ್ರಿ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿತ್ತು. ಕೇಂದ್ರ ಸರ್ಕಾರವು 59 ಚೀನೀ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಕಚೇರಿ ಟ್ವೀಟ್ ಮಾಡಿದ್ದು, ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು ಮತ್ತು ಜುಲೈ 1ರಿಂದ ದೇಶ ಅನ್ಲಾಕ್ 2.0ಗೆ ಹೆಜ್ಜೆ ಇಟ್ಟಿರುವ ನಡುವೆ ನಡೆಯಲಿರುವ ಈ ಭಾಷಣ ಸಹಜವಾಗಿಯೇ ಪ್ರಾಮುಖ್ಯತೆ ಗಳಿಸಿದೆ. ಈ
ನಡುವೆ ಕೇಂದ್ರ ಗೃಹ ಸಚಿವರು ಕೂಡ ಪ್ರಧಾನಿಯ ಇಂದಿನ ಭಾಷಣ ಪ್ರಾಮುಖ್ಯವಾಗಿದ್ದು, ದೇಶವಾಸಿಗಳಿಗೆ ಆಲಿಸಲು ಹೇಳಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.