ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಮೇ 3 ರ ತನಕ ಲಾಕ್ ಡೌನ್ ಅನ್ನು ವಿಸ್ತರಿಸಿದ್ದಾರೆ. ಮೋದಿ ಭಾಷಣದ ಬಳಿಕ ಅಮಿತ್ ಶಾ ಟ್ವೀಟ್ ಮಾಡಿದ್ದು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಯಾರೂ ಆತಂಕ ಪಡುವುದು ಬೇಡ. ದಿನಸಿ, ಔಷಧ ಸೇರಿ ಅಗತ್ಯ ವಸ್ತುಗಳ ಪೂರೈಕೆ ನಿಲ್ಲುವುದಿಲ್ಲ. ಸಾಕಷ್ಟು ದಾಸ್ತಾನಿದೆ ಎಂದು ಅಭಯ ನೀಡಿದ್ದಾರೆ.
ಇದೇ ವೇಳೆ ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಗಳಿಗೆ ಅಮಿತ್ ಶಾ ಸೂಚಿಸಿದ್ದಾರೆ. ಹಾಗೇ ಬಡಜನರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಇದು ಕಷ್ಟದ ಸಂದರ್ಭವಾಗಿದ್ದು, ಹಣವಂತರು, ಧನಿಕರು ಬಡಬಗ್ಗರಿಗೆ ಸಹಾಯ ಹಸ್ತ ಚಾಚಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇನ್ನು ಇದೇ ವೇಳೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಒಗ್ಗಟ್ಟಾಗಿ ನಿಂತಿರುವ ಎಲ್ಲ ರಾಜ್ಯಸರ್ಕಾರಗಳನ್ನೂ ಅಮಿತ್ ಶಾ ಹೊಗಳಿದ್ದಾರೆ.
ಇನ್ನು ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,000ದ ಗಡಿ ದಾಟಿದ್ದು, 339 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.








