ನವದೆಹಲಿ : ವಲಸೆ ಕಾರ್ಮಿಕರು ತುಂಬಿದ್ದ ರೈಲನ್ನು ಪಶ್ಚಿಮಬಂಗಾಳದ ಒಳಬರಲು ಬಿಡದೆ ವಲಸೆ ಕಾರ್ಮಿಕರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನ್ಯಾಯ ಎಸಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅಮಿತ್ ಶಾ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳದ ವಿವಿಧ ಕಡೆಗಳಿಂದ ದೇಶದ ಹಲವು ಕಡೆಗಳಿಗೆ ಕೆಲಸಕ್ಕಾಗಿ ತೆರಳಿದ್ದ 2 ಲಕ್ಷ ವಲಸೆ ಕಾರ್ಮಿಕರು ಲಾಕ್ ಡೌನ್ ಸಂಬಂಧ ತಮ್ಮ ತವರು ರಾಜ್ಯಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ವಲಸೆ ಕಾರ್ಮಿಕರಿದ್ದ ರೈಲು ಪ್ರವೇಶ ನಿರ್ಬಂಧ ವಿಧಿಸಿ ಅಸಹಕಾರ ತೋರಿಸಿದೆ. ಅಲ್ಲದೆ, ಇದು ವಲಸೆ ಕಾರ್ಮಿಕರಿಗೆ ಮಾಡಿದ ಅನ್ಯಾಯ, ಇದು ಮತ್ತೊಂದು ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಕೊರೊನಾ ಸೋಂಕಿನಿಂದ ಉಂಟಾದ ಸಾವುಗಳ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ. ಒಂದೆಡೆ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಕೇಂದ್ರ ಸರ್ಕಾರ ರಾಜಕೀಯವನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರೆ, ಮತ್ತೊಂದು ಕಡೆ ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಹೊರಡಿಸುವ ನಿಯಮಗಳನ್ನು ಜಾರಿಗೆ ತರದೆ ಪಶ್ಚಿಮಬಂಗಾಳ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.








